ನೀರಾವರಿ ಯೋಜನೆಯಲ್ಲಿ ನ್ಯಾಯ ಸಿಗಬೇಕಾದರೆ ಎಚ್‌ಡಿಕೆ ಬೆಂಬಲಿಸಿ: ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೃಷ್ಣೇಗೌಡ ಮನವಿ

Federation of Kannada Organizations Press Conference Mandya
Published on

ಮಂಡ್ಯ: ರಾಜ್ಯದ ನೀರಾವರಿ ವಿಚಾರಗಳಿಗೆ ನ್ಯಾಯ ಸಿಗಬೇಕಾದರೆ ಸಮರ್ಥ ನಾಯಕನ ಆಯ್ಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೃಷ್ಣೇಗೌಡ ಮನವಿ ಮಾಡಿದರು.

ಈ ಭಾಗದಲ್ಲಿ ಶೇ.90ರಷ್ಟು ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ನಾವು ಈವರೆಗೂ ಯಾವುದೇ ಪಕ್ಷವನ್ನೂ ಬೆಂಬಲಿಸಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿದ್ದರು. ರೈತರ ಬಗ್ಗೆ ಕಾಳಜಿ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ನಾವು ಪಕ್ಷಾತೀತವಾಗಿ ಬೆಂಬಲಿಸುತ್ತಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಒಂದು ವೇಳೆ ಕುಮಾರಸ್ವಾಮಿಯವರು ಆಯ್ಕೆಯಾದ ನಂತರ ಈ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದಲ್ಲಿ ಆಗ ನಾವು ಖಂಡಿತಾ ಅವರ ವಿರುದ್ಧ ಹೋರಾಟ ಮಾಡುತ್ತೇವೆ. ಬೆಂಗಳೂರಿನಲ್ಲಿರುವ ಕನ್ನಡಿಗರನ್ನು ಒಕ್ಕಲೆಬ್ಬಿಸಿ ಮಾಗಡಿ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಇದೊಂದು ಮಾಫಿಯಾ ರೀತಿಯಲ್ಲಿ ನಡೆಯುತ್ತಿದೆ. ಈಗಾಗಲೇ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕಾವೇರಿ ವಿಚಾರದಲ್ಲಿ ಮತ್ತಷ್ಟು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ವಿವಿಧ ಕನ್ನಡ ಸಂಘಟನೆಗಳ ಮುಖಂಡರಾದ ಲೋಕೇಶ್‌ಗೌಡ, ನರಸಿಂಹಮೂರ್ತಿ, ನಾರಾಯಣ್, ವಿನೋದ್‌ಗೌಡ, ಶೋಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net