

ವಿರಾಜಪೇಟೆ : ಕೃಷಿಕರ ಬಾಳು ಹಸನಾಗುವ ರೀತಿಯಲ್ಲಿ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಅಕ್ಕಿ ನೀಡುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳಿ ವಿರಾಜಪೇಟೆ ಫೆಡರೇಶನ್ ಸಂಸ್ಥೆ ನೂತನ ಬ್ರಾೃಂಡ್ ಅಕ್ಕಿಯನ್ನು ಮಾರುಕಟ್ಟೆಗೆ ಗುರುವಾರ ಬಿಡುಗಡೆಗೊಳಿಸಿತು.
ನಗರದ ದಖ್ಖನಿ ಮೊಹಲ್ಲಾದಲ್ಲಿ ಸ್ಥಾಪಿತಗೊಂಡಿರುವ ಅಕ್ಕಿ ಗಿರಣಿಯಲ್ಲಿ ಅಕ್ಕಿ ಬಿಡುಗಡೆ ಕಾರ್ಯಕ್ರಮ ಗುರುವಾರ ನಡೆಯಿತು. 25 ಕೆ.ಜಿ.ಯ ಚೀಲವನ್ನು ಗ್ರಾಹಕರಿಗೆ ಹಸ್ತಾಂತರ ಮಾಡುವ ಮೂಲಕ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳಿ, ಫೆಡರೇಶನ್‌ನ ಅಧ್ಯಕ್ಷ ವಾಟೇರಿರ ಪಿ. ಬೋಪಣ್ಣ ಚಾಲನೆ ನೀಡಿದರು.
ಫೆಡರೇಶನ್ ಸಂಸ್ಥೆ 1943 ರಲ್ಲಿ ಸ್ಥಾಪನೆಯಾಗಿದ್ದು, ಕೊಡಗಿನಲ್ಲಿ ತನ್ನ ವ್ಯಾಪಾರ ವೃದ್ಧಿಸಿಕೊಂಡು ಬೃಹತ್ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರಾಯೋಗಿಕವಾಗಿ ಸಂಸ್ಥೆಯು ಹೊಂದಿರುವ ಸ್ಥಳದಲ್ಲಿ ಎಲೆಕ್ಟ್ರಿಕಲ್ ಚಾರ್ಜರ್ ಪಾಯಿಂಟ್ ಸ್ಥಾಪನೆ ಮಾಡಿದ್ದು, ಗ್ರಾಹಕರಿಗೆ ತನ್ನ ಸೇವೆ ಒದಗಿಸುತ್ತಿದೆ. ಇದೀಗ ಜಿಲ್ಲೆಯಲ್ಲಿ ಬೆಳೆಯುವ ಭತ್ತವನ್ನು ಖರೀದಿಸಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಅಕ್ಕಿ ವಿತರಿಸಲು ಮುಂದಾಗಿದೆ. ಕೆ.ಜಿ. ಗೆ 55 ರೂ. ನಿಗದಿ ಪಡಿಸಲಾಗಿದೆ. ರಾಜ್ಯ ಸರ್ಕಾರವು ನೀಡುತ್ತಿರುವ ಬೆಂಬಲ ಬೆಲೆಕ್ಕಿಂತ ಅಲ್ಪ ಮೊತ್ತ ಹೆಚ್ಚಿಸಿ ರೈತರಿಂದ ನೇರವಾಗಿ ಭತ್ತ ಖರೀದಿ ಮಾಡಲಾಗುತ್ತಿದೆ. ರೈತರಿಂದ ರೈತರಿಗೆ ಎನ್ನುವ ಧ್ಯೇಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಕ್ಕಿಗಿರಣಿಯಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿ ಮಾಡುವ ಕೇಂದ್ರ ಸ್ಥಾಪಿಸಲಾಗುವುದು. ಮಾರುಕಟ್ಟೆ ದರಕ್ಕಿಂತ ಉತ್ತಮ ಬೆಲೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಫೆಡರೇಶನ್ ಉಪಾಧ್ಯಕ್ಷ ತಾತಂಡ ಎಂ.ಕಾವೇರಪ್ಪ, ನಿರ್ದೇಶಕರಾದ ಕಂಜಿತಂಡ ಮಂದಣ್ಣ, ಕೊಕ್ಕಂಡ ಎ. ಬಿದ್ದಪ್ಪ, ಮುಲ್ಲೇಂಗಡ ಎಂ.ಕುಟ್ಟಪ್ಪ, ಚೇನಂಡ ಗಿರೀಶ್ ಪೂಣಚ್ಚ, ಮಾಚಿಮಂಡ ಬಿ.ವಸಂತ, ಕುಂಬೇರ ಮನುಕುಮಾರ್, ಮೂಕೊಂಡ ಪಿ.ಸುಬ್ರಮಣಿ, ಕೆ.ಆರ್. ವಿನೋದ್, ಅಂಜಪರವಂಡ ಎಂ. ಮಂದಣ್ಣ, ಕೂತಂಡ ಬಿ.ಸಚಿನ್ ಕುಟ್ಟಯ್ಯ, ಪುಲಿಯಂಡ ಎ. ಪೊನ್ನಣ್ಣ, ಕರ್ತಚ್ಚೀರ ಬಿ.ಲತಾ , ಪುಟ್ಟಿಚಂಡ ವೀಣಾ ಮಹೇಶ್, ಹೆಚ್.ಎನ್. ಶೇಖರ್ ಮತ್ತು ಎಚ್.ಎ. ಆನಂದ ಹಾಗೂ ವ್ಯವಸ್ಥಾಪಕರಾದ ಕೆ.ಎಂ, ಚಂದ್ರಕಾಂತ್ ಮುಖೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.