

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತ್ಯುತ್ಸವ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಫೆ.19ರಂದು ಬೆಳಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಚ್.ಚಂದ್ರರಾವ್ ಕವಾಳೆ ತಿಳಿಸಿದರು.
ಅಂದು ಸಮಿತಿ ವತಿಯಿಂದ ಬೆಳಗ್ಗೆ 9.30ಕ್ಕೆ ಕೋಟೆ ಆಂಜನೇಯ ದೇವಸ್ಥಾನದಿಂದ ಶಿವಾಜಿ ಮಹಾರಾಜರ ಅದ್ದೂರಿ ಮೆರವಣಿಗೆ ಆಯೋಜಿಸಲಾಗಿದ್ದು, ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಮೆರವಣಿಗೆಗೆ ಮಾಜಿ ಮೇಯರ್ ಶಿವಕುಮಾರ್ ಚಾಲನೆ ನೀಡಲಿದ್ದು, ಮಾಜಿ ಶಾಸಕ ಮಾರುತಿ ರಾವ್ ಪವಾರ್ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಪ್ರಧಾನ ಭಾಷಣ ಮಾಡುವರು. ಸಂಸದರಾದ ಪ್ರತಾಪ್ ಸಿಂಹ, ವಿ.ಶ್ರೀನಿವಾಸಪ್ರಸಾದ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ ಭಾಗವಹಿಸಲಿದ್ದಾರೆ ಎಂದರು.ಸಮಿತಿಯ ಸದಸ್ಯರಾದ ಕೃಷ್ಣೋಜೀರಾವ್ ಗರ್ಗೆ, ಹರಿರಾವ್ ಸಿಂಧೆ, ಜಿ.ಜ್ಞಾನಪ್ರಕಾಶ್, ಗೋಪಾಲ್ ಜಾಧವ್ ಇತರರು ಇದ್ದರು.