ಮೈಸೂರು: ರೈತ ಮುಖಂಡ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನದ ನೆನಪಿನಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಫೆ.10ರಂದು ಬೃಹತ್ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಆಯೋಜಿಸುವ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಬಿ.ಆರ್.ಪಾಟೀಲ್, ದರ್ಶನ್ ಪುಟ್ಟಣ್ಣಯ್ಯ ಭಾಗವಹಿಸುವರು. ರೈತ ವಿರೋಧಿ ಶಾಸನಗಳು ಹಿಂತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ 38 ಪುಟದ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸ್ತುತ ದೇಶದಲ್ಲಿ ರೂಪುಗೊಂಡಿರುವ ಬಂಡವಾಳಶಾಹಿಪರ ನಿಲುವು, ದುಡಿಯುವ ವರ್ಗದ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ನಂಜುಂಡಸ್ವಾಮಿಯವರ ಚಿಂತನೆ, ಮಾರ್ಗ ದೊಡ್ಡ ಪ್ರೇರಣೆ. ಅವರ ಜನನವಾಗಿ 88 ವರ್ಷ ತುಂಬಲಿದ್ದು, ಅಂದು ರಾಜ್ಯ ಸರ್ಕಾರವನ್ನು ರೈತಪರ ಬಜೆಟ್ ಮಂಡಿಸುವಂತೆ ಒತ್ತಾಯಿಸಲಾಗುವುದು ಎಂದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ತಾಲೂಕು ಗೌರವಾಧ್ಯಕ್ಷ ನಾಗನಹಳ್ಳಿ ವಿಜೇಂದ್ರ, ರೈತ ಮುಖಂಡ ಬಿ.ಮರಂಕಯ್ಯ ಮತ್ತಿತರರಿದ್ದರು.