ರಾಜ್ಯ ಸರ್ಕಾರಕ್ಕೆ ಫೆ. 7ರ ಗಡುವು

AGM
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯ ಸರ್ಕಾರ ಭರವಸೆ ನೀಡಿದಂತೆ ಫೆಬ್ರವರಿ 7ರೊಳಗೆ ಜೈನ ಆಯೋಗ ರಚನೆ ಮಾಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ತಾಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ರಾಷ್ಟ್ರಸಂತ ಶ್ರೀ ಗುಣಧರನಂದಿ ಮಹಾರಾಜರು ತಿಳಿಸಿದರು.

ವರೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 8ರಂದು ಚಿಕ್ಕೋಡಿ ತಾಲೂಕಿನ ಶಮಣೇವಾಡಿಯಲ್ಲಿ ಸುಮಾರು 1 ಲಕ್ಷ ಜೈನ ಸಮಾಜದವರನ್ನು ಸೇರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಹಿರೇಕೋಡಿಯ ಆಚಾರ್ಯ ಶ್ರೀ ಕಾಮಕುಮಾರ ಮಹಾರಾಜರ ಹತ್ಯೆಯನ್ನು ಖಂಡಿಸಿ ನಾವು ಅನ್ನ-ನೀರು ತ್ಯಾಗ ಮಾಡಿ ಉಪವಾಸ ಕೈಗೊಂಡಿದ್ದೆವು. ಆಗ ನಮ್ಮನ್ನು ಭೇಟಿಯಾದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಮುಂದೆ ನಾವು ನಾಲ್ಕು ಬೇಡಿಕೆಗಳನ್ನು ಇಟ್ಟಿದ್ದೇವೆ. ಜೈನ ಮುನಿಗಳ ರಕ್ಷಣೆಗೆ ಪೊಲೀಸ್ ಭದ್ರತೆ ನೀಡಿರುವುದು ಸೇರಿ ಎರಡು ಬೇಡಿಕೆಗಳನ್ನು ಮಾತ್ರ ಸರ್ಕಾರ ಈಡೇರಿಸಿದೆ ಎಂದು ಹೇಳಿದರು.

ಭರವಸೆ ನೀಡಿದಂತೆ ಜೈನ ಆಯೋಗ ರಚನೆ ಮಾಡಿಲ್ಲ. ಪರ್ಯಟನೆಯಲ್ಲಿರುವ ಜೈನ ಮುನಿಗಳಿಗೆ ರಾತ್ರಿ ವಾಸ್ತವ್ಯ ಮಾಡಲು ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎರಡು ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಫೆ. 7ರವರಗೆ ಗಡುವು ನೀಡುತ್ತೇವೆ. ಅಲ್ಲಿಯವರೆಗೆ ಈಡೇರದಿದ್ದರೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net