

ಹಿರೇಕೆರೂರ: ಹಬ್ಬದ ಹೋರಿ ಮೋಸದಿಂದ ಮಾರಾಟ ಮಾಡಿಸಿ ಹಣ ಹಾಗೂ ಹೋರಿ ವಾಪಸ್ ಕೊಡದ ಹಿನ್ನೆಲೆಯಲ್ಲಿ ಹೋರಿ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಾಲೂಕಿನ ಹೊಲಬಿಕೊಂಡ ಗ್ರಾಮದಲ್ಲಿ ನಡೆದಿದ್ದು, ಪ್ರಕರಣದ ಸಂಬಂಧ 6 ಜನರ ವಿರುದ್ಧ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ನೂಲೇಶ ಈರಪ್ಪ ಮುತ್ತಗಿ (45) ಆತ್ಮಹತ್ಯೆ ಮಾಡಿಕೊಂಡ ಹೋರಿ ಮಾಲೀಕ.
ಈತನ ಪತ್ನಿ ನೀಡಿದ ದೂರಿನ ಮೇರೆಗೆ ಗ್ರಾಮದ ಲೋಕಪ್ಪ ಹುಲ್ಲತ್ತಿ, ಸಿದ್ದಪ್ಪ ವೀರಭದ್ರಪ್ಪ ಹುಡೇದ, ಶಿಕಾರಿಪುರ ತಾಲೂಕಿನ ಮುಳಕೊಪ್ಪ ಗ್ರಾಮದ ರಾಜಪ್ಪ ಹುಳ್ಳೇರ, ಪ್ರಭಾಕರ ಹುಳ್ಳೇರ ಹಾಗೂ ಮಳವಳ್ಳಿ ಗ್ರಾಮದ ಪರಮೇಶಪ್ಪ ಗೌಡ್ರ, ನವೀನ ಪರಮೇಶಪ್ಪ ಗೌಡ್ರ ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ...
ನೂಲೇಶ ಹಬ್ಬದ ಹೋರಿ ಸಾಕಿಕೊಂಡಿದ್ದ. ಅದನ್ನು 4&5 ಹಬ್ಬಗಳಲ್ಲಿ ಓಡಿಸಿ ಕೊಡುತ್ತೇವೆ ಎಂದು ರಾಜಪ್ಪ ಹಾಗೂ ಪ್ರಭಾಕರ ತೆಗೆದುಕೊಂಡು ಹೋಗಿ ಹೋರಿ ಸ್ಪರ್ಧೆ ಹಬ್ಬಕ್ಕೆ ಬಿಟ್ಟಿದ್ದರು. ಹೋರಿ ಚನ್ನಾಗಿ ಓಡಿದ್ದರಿಂದ ಅದನ್ನು ನಮಗೆ ಮಾರಾಟ ಮಾಡುವಂತೆ ಇಬ್ಬರು ನೂಲೇಶನಿಗೆ ಒತ್ತಾಯ ಮಾಡಿದ್ದರು. ಆದರೆ, ಇದಕ್ಕೆ ನೂಲೇಶ ಒಪ್ಪಿರಲಿಲ್ಲ. ಅಲ್ಲದೆ ಆರೋಪಿತರ ಮನೆಗೆ ಹೋದ ನೂಲೇಶ ಹೋರಿಯನ್ನು ವಾಪಸ್ ತೆಗೆದುಕೊಂಡು ಬಂದಿದ್ದ.
ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳಾದ ರಾಜಪ್ಪ ಹಾಗೂ ಪ್ರಭಾಕರ ಉಳಿದ ಆರೋಪಿತರನ್ನು ಸೇರಿಸಿಕೊಂಡು ಕುತಂತ್ರ ಮಾಡಿ 1.33 ಲಕ್ಷ ರೂ. ಹೋರಿಯನ್ನು ಲೋಕಪ್ಪ ಹಾಗೂ ಸಿದ್ದಪ್ಪ ಎಂಬುವರಿಗೆ ಮಾರಾಟ ಮಾಡಿಸಿದ್ದರು. ಎರಡು ದಿನ ಬಿಟ್ಟು ಹಣ ಕೊಡುವುದಾಗಿ ಹೇಳಿ ಹೋರಿಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ, ನೂಲೇಶ ಹಣ ಕೇಳಿದಾಗ ಹಣ ಹಾಗೂ ಹೋರಿ ಎರಡನ್ನು ಕೊಡುವುದಿಲ್ಲ ಎಂದು ಹೇಳಿದ್ದರು.
ಅಲ್ಲದೆ ನೂಲೇಶನ ಅತ್ತೆಗೆ ಫೋನ್ ಮಾಡಿ ನಿನ್ನ ಅಳಿಯ ಹೋರಿ ಕೊಡು ಎಂದರೆ ಕೊಡಲಿಲ್ಲ. ನಾವೀಗ ಬೇರೆಯವರಿಗೆ ಅದನ್ನು ಮಾರಾಟ ಮಾಡಿಸಿದಂತೆ ಮಾಡಿ ನಾವೇ ತೆಗೆದುಕೊಂಡು ಬಂದಿದ್ದೇವೆ. ಅವನಿಗೆ ಹಣ ಮತ್ತು ಹೋರಿ ಕೊಡುವುದಿಲ್ಲ ಎಂದು ಹೇಳಿದ್ದರು.
ಇದರಿಂದ ಮನನೊಂದು ನೂಲೇಶ ಮನೆಯಲ್ಲಿಯೆ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನು ಹಿರೇಕೆರೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ಆತನ ಪತ್ನಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.