ನರೇಗಾ ಪ್ರಗತಿ ಕುಂಠಿತವಾಗುವ ಆತಂಕ

16sirsi4
Published on

 ಶಿರಸಿ: ರಾಜ್ಯ ಸರ್ಕಾರವು 2025-26 ನೇ ಸಾಲಿನಿಂದ ಅನ್ವಯವಾಗುವಂತೆ ನರೇಗಾ ಯೋಜನೆಯಲ್ಲಿ ಬದಲಾವಣೆ ಮಾಡಿರುವುದರಿಂದ ಯೋಜನೆಯ ಪ್ರಗತಿ ಕಡಿಮೆಯಾಗಲಿದ್ದು, ಇದರಿಂದ ಅರ್ಹ ರೈತರಿಗೆ ಅನ್ಯಾಯವಾಗಲಿದೆ. ಮೊದಲಿನ ರೀತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿ, ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಸದಸ್ಯರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈಗ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಎಂಡ್ ಟು ಎಂಡ್ ತಂತ್ರಾಂಶದಲ್ಲಿ ತಯಾರಿಸಿ, ಆನ್​ಲೈನ್​ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಮೋದನೆ ಪಡೆಯಲಾಗುತ್ತಿದೆ. ಎಂಡ್ ಟು ಎಂಡ್ ತಂತ್ರಾಂಶದಲ್ಲಿ ಮಂಜೂರಾದ ಕಾಮಗಾರಿಗಳನ್ನು ಮಾತ್ರ ಅನುಷ್ಠಾನಗೊಳಿಸಲು ಅವಕಾಶವಿದೆ. ಇದರಿಂದಾಗಿ, ನಡೆಸುತ್ತಿರುವ ಕಾಮಗಾರಿಗೆ ಪೂರಕವಾಗಿ ಯಾವುದೇ ಕೆಲಸವನ್ನು ಉದ್ಯೋಗ ಖಾತ್ರಿಯಲ್ಲಿ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಹಿಂದಿನ ವರ್ಷ ಮಂಜೂರಾದ ಕಾಮಗಾರಿಗಳನ್ನು ಅನುಷ್ಠಾನಕ್ಕೆ ಅವಕಾಶವಿಲ್ಲ. ಎಂಡ್ ಟು ಎಂಡ್ ತಂತ್ರಾಂಶದಲ್ಲಿ ಗ್ರಾಮ ಪಂಚಾಯಿತಿವಾರು ಇಂತಿಷ್ಟೆ ಮೊತ್ತಕ್ಕೆ ಕ್ರಿಯಾಯೋಜನೆ ತಯಾರಿಸಬೇಕೆಂಬ ನಿರ್ಬಂಧ ಇರುವುದರಿಂದ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಸ್ವೀಕರಿಸಲಾದ ಎಲ್ಲ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅನೇಕ ರೈತರ ಕಾಮಗಾರಿಗಳು ಕ್ರಿಯಾ ಯೋಜನೆಯಿಂದ ಕೈಬಿಟ್ಟು ಹೋಗಿ ರೈತರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ, ನರೇಗಾ ಯೋಜನೆಯಡಿ ಸಮುದಾಯದ ಕಾಮಗಾರಿಗಳಾದ ಸಾರ್ವಜನಿಕ ಕುಡಿಯುವ ನೀರಿನ ಬಾವಿ ನಿರ್ವಣ, ಅಂಗನವಾಡಿ ಕೇಂದ್ರಗಳ ನಿರ್ವಣ, ಗ್ರಾಪಂ ಕಟ್ಟಡ ನಿರ್ವಣ, ಸಂಜೀವಿನಿ ಶೆಡ್, ಸಮುದಾಯ ಶೌಚಗೃಹ, ಚೆಕ್ ಡ್ಯಾಂ, ಕಿಂಡಿ ಆಣೆಕಟ್ಟು, ಪ್ರವಾಹ ನಿಯಂತ್ರಣ ತಡೆಗೋಡೆಗಳ ನಿರ್ವಣ, ಶಾಲಾ ಆಟದ ಮೈದಾನ ಅಭಿವೃದ್ಧಿ, ಶಾಲಾ ಕಾಂಪೌಂಡ್ ಸೇರಿ ಅನೇಕ ಕೆಲಸ ಮಾಡಿಕೊಳ್ಳಲು ಅವಕಾಶ ಇಲ್ಲದಂತಾಗಿದೆ . ನರೇಗಾ ಯೋಜನೆ ಅನುಷ್ಠಾನದಲ್ಲಿ 2025ರ ಪೂರ್ವದಲ್ಲಿರುವ ರೀತಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಲಾಯಿತು.

ಮನವಿ ಸ್ವೀಕರಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ ನೆರವಿನಿಂದ ಗ್ರಾಪಂಗಳು ವಿವಿಧ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗಿದೆ. ಅನೇಕ ತೊಂದರೆಗಳು ರಾಜ್ಯ ಸರ್ಕಾರದಿಂದ ಆಗಿದೆ ಎಂಬುದನ್ನು ಸದಸ್ಯರು ಗಮನಕ್ಕೆ ತಂದಿದ್ದಾರೆ. ರಾಜ್ಯ ಸರ್ಕಾರದ ಸಚಿವರಲ್ಲಿ, ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಸಂರ್ಪಸಿ, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆಗಬೇಕಾಗಿರುವ ಅಪೇಕ್ಷಿತ ಕಾರ್ಯ ಮಾಡಿಕೊಡಲು ಕೇಂದ್ರದ ಮೇಲೆ ಒತ್ತಡ ಹೇರುತ್ತೇನೆ. ನರೇಗಾ ಯೋಜನೆ ಅನುಷ್ಠಾನಕ್ಕೆ ಸರಳೀಕರಣ ಮಾಡಿ ರಾಜ್ಯ ಸರ್ಕಾರ ಜವಾಬ್ದಾರಿಯುತವಾಗಿ ಸ್ಪಂದಿಸಿ, ಪರಿಹಾರ ದೊರಕಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.

ಶಿರಸಿ ತಾಲೂಕಿನ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವೀಶ ಹೆಗಡೆ, ಸದಸ್ಯರಾದ ನಾರಾಯಣ ಹೆಗಡೆ ಮತ್ತಿತರರು ಇದ್ದರು. ಬಳಿಕ ಶಾಸಕ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net