ಬಳ್ಳಾರಿ ; ರಾಜ್ಯದ ಹಿಂಗಾರು ಹಂಗಾಮಿನಲ್ಲಿ ಬೆಳೆದ ಬಿಳಿ ಜೋಳವನ್ನು ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಒಂದು ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಮಿತಿ ನಿಗದಿಗೊಳಿಸಿತ್ತು. ಆದರೆ, ಸಾವಿರಾರು ರೈತರು ಇನ್ನೂ ನೋಂದಣಿಯಾಗುವ ಮುನ್ನವೇ ಖರೀದಿ ಮಿತಿ ಪೂರ್ಣಗೊಳ್ಳುವ ಅತಂಕ ರೈತರದ್ದಾಗಿದೆ.
ಬೆಂಬಲ ಬೆಲೆಯಡಿ ಮಾಲ್ದಂಡಿ ಜೋಳ ಪ್ರತಿ ಕ್ವಿಂಟಲ್‌ಗೆ 3,421 ರೂ. ಹೈಬ್ರಿಡ್ ಜೋಳ ಪ್ರತಿ ಕ್ವಿಂಟಲ್‌ಗೆ 3,371 ರೂ. ನಿಗದಿ ಮಾಡಲಾಗಿತ್ತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ನೋಡಲ್ ಏಜೆನ್ಸಿಯಾಗಿದೆ. ಪ್ರತಿ ರೈತರಿಂದ ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್ ಬಿಳಿಜೋಳ ಖರೀದಿಸಲು ಉದ್ದೇಶಿಸಲಾಗಿದೆ. ಆದರೆ, ಬೆಂಬಲ ಬೆಲೆ ಯೋಜನೆಯಡಿ ಹಿಂಗಾರಿನಲ್ಲಿ ಬೆಳೆದಿರುವ ಜೋಳ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದ ಮೂರು ದಿನಗಳಲ್ಲೆ ಅಕ್ರಮ ನೋಂದಣಿ ಹಿನ್ನೆಲೆ 1 ಲಕ್ಷ ಮೆಟ್ರಿಕ್ ಟನ್ ನಲ್ಲಿ ಕೇವಲ ಐವತ್ತು ಸಾವಿರ ಕ್ವಿಂಟಾಲ್ ಮಾತ್ರ ನೋಂದಣಿ ಬಾಕಿ ಉಳಿದಿದೆ. ಇದರಿಂದ, ರಾಜ್ಯಾದ್ಯಂತ ಸಾವಿರಾರು ರೈತರು ಈ ಬಾರಿ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಯಡಿ ಜೋಳ ಮಾರಾಟ ಮಾಡುವುದು ಅನುಮಾನ ಮೂಡಿದೆ.
ಸರ್ವರ್ ಸಮಸ್ಯೆ : ರಾಜ್ಯದಲ್ಲಿ ಅತಿ ಹೆಚ್ಚು ಜೋಳ ಬೆಳೆಯುವ ಜಿಲ್ಲೆಗಳಾದ ಬಳ್ಳಾರಿ 40 ಸಾವಿರ, ರಾಯಚೂರು 80 ಸಾವಿರ, ಕಲಬುರಗಿ 40 ಸಾವಿರ ಕ್ವಿಂಟಾಲ್ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ಮಿತಿ ನಿಗದಿ ಮಾಡಲಾಗಿತ್ತು. ಆದರೆ, ಈ ಬಾರಿ ನಿರೀಕ್ಷಿತ ಪ್ರಮಾಣಕ್ಕಿಂತ ಅಧಿಕ ಇಳುವರಿ ಬಂದ ಪರಿಣಾಮ ಖರೀದಿ ಮಿತಿ ಸಡಿಲಗೊಳಿಸಬೇಕು ಎಂದು ರೈತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಹೆಚ್ಚುವಾರಿಯಾಗಿ ಖರೀದಿಸುವುದಾಗಿ ಆದೇಶ ಹೊರಡಿಸಿ ಜಿಲ್ಲೆಯ ವಿವಿಧಡೆ ಹೆಚ್ಚಿನ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ, ಖರೀದಿ ಕೇಂದ್ರ ಆರಂಭವಾದ ದಿನದಿಂದ ಸೂಕ್ತವಾದ ಸರ್ವರ್ ಕೊರತೆಯಿಂದ ಖರೀದಿ ಕೇಂದ್ರಗಳ ಮುಂಭಾಗ ರಾತ್ರಿಯಿಂದ ಬೆಳಗ್ಗೆಯವರೆಗೆ ಸರತಿಯಲ್ಲಿ ನಿಂತರೂ ಕೂಡ ನೋಂದಣಿಯಾಗಿಲ್ಲ. ಅಧಿಕಾರಿಗಳು ಕೆಲ ರೈತರ ಜತೆ ಶಾಮೀಲು ಆಗಿ ಲಕ್ಷಾಂತರ ಕ್ವಿಂಟಾಲ್ ಜೋಳವನ್ನು ಅಕ್ರಮ ನೋಂದಾಯಿಸಿದ್ದಾರೆ ಎಂದು ಖರೀದಿ ಕೇಂದ್ರದ ನೋಂದಣಿ ಅಧಿಕಾರಿಯೊಬ್ಬ ತಿಳಿಸಿದರು.
ಅಕ್ರಮ ನೋಂದಣಿ : ಜಿಲ್ಲೆಯಲ್ಲಿ ಬಿಳಿ ಜೋಳವನ್ನು ಆರಂಭದಲ್ಲಿ 40 ಸಾವಿರ ಕ್ವಿಂಟಾಲ್ ಖರೀದಿಸಲು ಮಿತಿಗೊಳಿಸಲಾಗಿತ್ತು. ಆದರೆ, ರೈತರಿಗೆ ಸಮರ್ಪಕ ಮಾಹಿತಿ ನೀಡದೆ ರಜೆ ದಿನಗಳಲ್ಲೆ ಅಧಿಕಾರಿಗಳು ಕೆಲ ರೈತರಿಗೆ ಅಕ್ರಮವಾಗಿ ನೋಂದಾಯಿಸಿಕೊಂಡಿದ್ದರು. ಇದರ ಬಗ್ಗೆ ರೈತರು ಪ್ರತಿಭಟನೆ ನಡೆಸಿ ನೋಂದಣಿ ರದ್ದು ಹಾಗೂ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮುಂದಾಗಲು ಒತ್ತಾಯಿಸಿದ್ದರು. ಆಹಾರ ಮತ್ತು ಸರಬರಾಜು ಇಲಾಖೆ ತನಿಖೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು ಈವರೆಗೂ ವರದಿ ಬಹಿರಂಗಗೊಳಿಸಿಲ್ಲ. ಈ ಸಾಲಿನ ಮುಂಗಾರಿನಲ್ಲಿ 3.60 ಲಕ್ಷ ಕ್ವಿಂಟಾಲ್ ಗೆ ನೋಂದಾಯಿಸಿಕೊಂಡಿದ್ದರು. ಆದರೆ, ಖರೀದಿ ಕೇಂದ್ರದಲ್ಲಿ ಕೇವಲ 2.10 ಲಕ್ಷ ಕ್ವಿಂಟಾಲ್ ಜೋಳವನ್ನು ಖರೀದಿ ಕೇಂದ್ರದಲ್ಲಿ ಜೋಳ ಮಾರಾಟ ಮಾಡಲಾಗಿದೆ. ಇದರಿಂದ ಅಧಿಕಾರಿಗಳು ಅಕ್ರಮವಾಗಿ ನೋಂದಾಯಿಸಿಕೊಂಡಿದ್ದರೆ ಎಂಬುದು ಸಾಬೀತಯಾಗಿದೆ.
ಕೋಟ್... ಸರ್ಕಾರ ಆದೇಶದಂತೆ ಒಂದು ಲಕ್ಷ ಮೆಟ್ರಿಕ್ ಟನ್ ನಲ್ಲಿ ಖರೀದಿಯಲ್ಲಿ ಬಹುತೇಕ ನೋಂದಣಿಯಾಗಿದೆ. ರಾಜ್ಯಾದ್ಯಾಂತ ಇನ್ನೂ 50 ಸಾವಿರ ಕ್ವಿಂಟಾಲ್ ನೋಂದಣಿಗೆ ಅವಕಾಶವಿದೆ. ಅದು ಪೂರ್ಣ ಗೊಂಡ ಬಳಿಕ ನೋಂದಣಿಗೆ ಅವಕಾಶ ಇರುವುದಿಲ್ಲ .
- ಸಕೀನ, ಉಪ ನಿರ್ದೇಶಕಿ, ಆಹಾರ ಇಲಾಖೆ, ಬಳ್ಳಾರಿ.