

ಸವದತ್ತಿ:ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿರ್ಣಾಯಕ ಘಟ್ಟವಾಗಿದ್ದು, ನಿರ್ಭಯವಾಗಿ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಗುರುಭವನದಲ್ಲಿ ಶಿಕ್ಷಣ ಇಲಾಖೆಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಅಭಿಪ್ರೇರಣಾ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಜ್ಞಾನವಿದ್ದರೂ ಭಯದ ಕಾರಣ ವಿದ್ಯಾರ್ಥಿಗಳು ಸರಿಯಾಗಿ ಪರೀಕ್ಷೆ ಬರೆಯುತ್ತಿಲ್ಲ. ಭಯಬಿಟ್ಟು ಪರೀಕ್ಷೆ ಬರೆದಾಗ ಹೆಚ್ಚು ಅಂಕ ಗಳಿಸಲು ಸಾಧ್ಯ ಎಂದು ಅರಿತು ಈ ಕಾರ್ಯಾಗಾರ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. 2023-24ನೇ ಸಾಲಿನ ಟಾಪ್-10 ವಿದ್ಯಾರ್ಥಿಗಳಿಗೆ ನೀಡಲಾದ ಬಹುಮಾನ ಈ ಬಾರಿಯೂ ಮುಂದುವರಿಯಲಿದೆ. ವಿದ್ಯಾರ್ಥಿಗಳು ಉತ್ಸಾಹ, ನಿರ್ಭೀತಿಯಿಂದ ಪರೀಕ್ಷೆ ಎದುರಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಕುರಿತಾಗಿರುವ ಗೊಂದಲಗಳನ್ನು ದೂರ ಮಾಡುವುದೇ ಕಾರ್ಯಾಗಾರದ ಉದ್ದೇಶ. ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕ ಗಳಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಬೇಕು ಎಂದರು.
ಶಿಕ್ಷಣ ಇಲಾಖೆ ನಿವತ್ತ ಉಪನಿರ್ದೇಶಕ ಎ.ಸಿ. ಗಂಗಾಧರ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳು ಓದಬೇಕಾದ ವಿಧಾನ, ಸಮಯ ಮತ್ತು ರೀತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಮೊದಲ 10 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ವಿಶ್ವಾಸ ವೈದ್ಯ ತಲಾ 5000 ರೂ. ಬಹುಮಾನ ನೀಡಿದರು. ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ, ಅಕ್ಷರ ದಾಸೋಹ ಅಧಿಕಾರಿ ಮೈತ್ರಾದೇವಿ ವಸದ, ನೌಕರರ ಸಂಘದ ಅಧ್ಯಕ್ಷ ಅಶೋಕ ಮುರಗೋಡ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್. ಬ್ಯಾಳಿ, ಪ್ರೌಢಶಾಲಾ ಸಂಘದ ಅಧ್ಯಕ್ಷ ಆರ್.ಸಿ. ರಾಠೋಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಆದರ್ಶ ವಿದ್ಯಾಲಯ ಮುಖ್ಯಶಿಕ್ಷಕ ಆರ್.ಎ್. ಮಾಗಿ ಇತರರು ಇದ್ದರು.