ಜಿಲ್ಲೆಯ ಜನರಿಗೆ ಸೋಂಕು ಹರಡುವ ಭೀತಿ!

16-hvr-03
Published on

ಹಾವೇರಿ: ಮೇ 3ರವರೆಗೆ ಕರೊನಾ ಮುಕ್ತವಾಗಿದ್ದ ಜಿಲ್ಲೆಗೆ ಮುಂಬೈನಿಂದ ಬಂದ ಮೂವರು ಕರೊನಾ ಸೋಂಕು ಹೊತ್ತು ತಂದ ಪರಿಣಾಮ ಜಿಲ್ಲೆಯು ಹಸಿರು ವಲಯದಿಂದ ಕಿತ್ತಳೆ ವಲಯಕ್ಕೆ ಸೇರ್ಪಡೆಗೊಂಡಿತು. ಆದರೂ ಸದ್ಯ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಆದರೆ, ಇಂಥ ಸಮಯದಲ್ಲಿ ಮಹಾರಾಷ್ಟ್ರದ ಮುಂಬೈನಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಜಿಲ್ಲೆಯಲ್ಲಿ ಮತ್ತೆ ಕರೊನಾ ಸೋಂಕಿನ ಭೀತಿ ಶುರುವಾಗಿದೆ.

ಜಿಲ್ಲೆಗೆ ಕರೊನಾ ಬಂದಿದ್ದೇ ಮುಂಬೈ ಮೂಲದಿಂದ. ಮತ್ತೆ ಅಲ್ಲಿಂದಲೇ ಹಾವೇರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ 1,200 ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ಶೀಘ್ರದಲ್ಲಿಯೇ ಜಿಲ್ಲೆಗೆ ಬರಲಿದೆ. ಈ ರೈಲನ್ನು ಬರಮಾಡಿಕೊಳ್ಳಲು ಜಿಲ್ಲೆಯ ಅಧಿಕಾರಿಗಳು ಅಗತ್ಯ ಸಿದ್ಧತಾ ಕ್ರಮಗಳನ್ನು ಈಗಾಗಲೇ ನಡೆಸಿದ್ದಾರೆ.

ಮುಂಬೈನಿಂದ ನೇರವಾಗಿ ಹಾವೇರಿಗೆ ರೈಲು: ಮಹಾರಾಷ್ಟ್ರಕ್ಕೆ ವಿವಿಧ ಕೆಲಸಗಳಿಗೆ ಹೋಗಿ ಸಿಲುಕಿಕೊಂಡಿರುವವರು ಹಾಗೂ ಅಲ್ಲಿಗೆ ವಲಸೆ ಹೋಗಿದ್ದ ರಾಜ್ಯದವರನ್ನು ಹೊತ್ತ ವಿಶೇಷ ರೈಲು ನೇರವಾಗಿ ಹಾವೇರಿಗೆ ಬರಲಿದೆ. ಶೀಘ್ರದಲ್ಲಿಯೇ ಮುಂಬೈನಿಂದ ಹೊರಡುವ ದಿನಾಂಕ, ಸಮಯ ಪ್ರಕಟವಾಗುವ ನಿರೀಕ್ಷೆಯಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ಬಂದಿದ್ದು, ಜಿಲ್ಲಾಧಿಕಾರಿಗಳು ರೈಲನ್ನು ಯಾವ ರೀತಿ ಸ್ವಾಗತಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರವರ ಊರುಗಳಿಗೆ ಕಳಿಸಬೇಕು ಎಂಬ ಚರ್ಚೆ ನಡೆಸಿದ್ದಾರೆ. ಈ ವಿಶೇಷ ರೈಲಿನಲ್ಲಿ ಅಂದಾಜು 1,200 ಪ್ರಯಾಣಿಕರು ಬರಲಿದ್ದಾರೆ. ಇದರಲ್ಲಿ ಶೇ. 60ರಷ್ಟು ಪ್ರಯಾಣಿಕರು ಹಾವೇರಿ ಜಿಲ್ಲೆಯವರೇ ಆಗಿರುವುದರಿಂದ ಮಹಾರಾಷ್ಟ್ರದಿಂದ ನೇರವಾಗಿ ಹಾವೇರಿ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲು ಆಗಮಿಸಿ ರಾಜ್ಯದ ವಿವಿಧ ಜಿಲ್ಲೆಯವರು ಸೇರಿ ಎಲ್ಲರನ್ನೂ ಹಾವೇರಿ ನಿಲ್ದಾಣದಲ್ಲಿಯೇ ಇಳಿಸಲಾಗುತ್ತಿದೆ.

ರೈಲಿನ ಪ್ರತಿ ಬೋಗಿಯಲ್ಲಿ 50 ಜನರು ಮಾತ್ರ ಪ್ರಯಾಣಿಸಲು ಅವಕಾಶ ಕೊಡಲಾಗಿದೆ. ಅಂದಾಜು 22ರಿಂದ 24 ಬೋಗಿಗಳಲ್ಲಿ ಪ್ರಯಾಣಿಕರು ಹಾವೇರಿ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್​ಫಾರಂಗೆ ಬಂದಿಳಿಯಲ್ಲಿದ್ದಾರೆ. ಹಾವೇರಿ ಜಿಲ್ಲೆಯ ಪ್ರಯಾಣಿಕರಿಗೆ ತಾಲೂಕುವಾರು ಕೌಂಟರ್​ಗಳನ್ನು ತೆರೆಯಲಾಗುತ್ತಿದೆ. ಧಾರವಾಡ, ಬೆಳಗಾವಿ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಬೀದರ, ವಿಜಯಪುರ, ಯಾದಗಿರಿ ಒಳಗೊಂಡಂತೆ ವಿವಿಧ ಜಿಲ್ಲೆಯ ಪ್ರಯಾಣಿಕರಿಗೆ ಜಿಲ್ಲಾವಾರು ಕೌಂಟರ್ ತೆರೆಯಲಾಗುತ್ತಿದೆ. ಆರೋಗ್ಯ ತಪಾಸಣೆ ನಡೆಸಿ ಇಲ್ಲಿಂದ ಆಯಾ ತಾಲೂಕು ಹಾಗೂ ಜಿಲ್ಲೆಗಳಿಗೆ ಕರೆದೊಯ್ಯಲು ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.

ಮುಂಬೈನಿಂದ ಬಂದವರು ಎಂದರೇ ಆತಂಕ: ಜಿಲ್ಲೆಯಲ್ಲಿ ಈವರೆಗೂ ಪತ್ತೆಯಾಗಿರುವ ಮೂವರು ಕರೊನಾ ಸೋಂಕಿತರು ಮುಂಬೈನಿಂದಲೇ ಬಂದವರು. ಹೀಗಾಗಿ ಜಿಲ್ಲೆಯಲ್ಲಿ ಮುಂಬೈನಿಂದ ಬಂದವರು ಎಂದರೆ ಒಂದು ರೀತಿಯ ಆತಂಕ ಮನೆಮಾಡಿದೆ. ಇಂತಹ ಸಮಯದಲ್ಲಿ ಮುಂಬೈನಿಂದ ರೈಲಿನಲ್ಲಿ ಸಾವಿರಗಟ್ಟಲೇ ಜನ ಬರುತ್ತಿದ್ದಾರೆ ಎಂಬ ಸುದ್ದಿ ಜಿಲ್ಲೆಯ ಜನರಲ್ಲಿ ಹೆಚ್ಚಿನ ಭೀತಿ ಮೂಡಿಸಿದೆ. ಜಿಲ್ಲಾಡಳಿತ ಸೋಂಕು ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಿದ್ಧತೆಗಳನ್ನೂ ಕೈಗೊಂಡಿದೆ.

ಮಹಾರಾಷ್ಟ್ರದಿಂದ ಜಿಲ್ಲೆಗೆ ರೈಲಿನ ಮೂಲಕ ಜನರನ್ನು ಕಳಿಸಿಕೊಡುವ ಸೂಚನೆ ಬಂದಿದೆ. ಆದರೆ ರೈಲಿನ ವೇಳಾಪಟ್ಟಿ ಇನ್ನೂ ಸಿದ್ಧವಾಗಿಲ್ಲ. ರೈಲಿನಲ್ಲಿ ಬರುವ ಎಲ್ಲರನ್ನೂ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗುವುದು. ಬಸ್​ಗೆ ತೆರಳುವ ಮುನ್ನ ಪ್ರತಿ ಪ್ರಯಾಣಿಕರ ತಪಾಸಣೆ ನಿಲ್ದಾಣದಲ್ಲಿಯೇ ನಡೆಯಲಿದೆ. ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯಲ್ಲಿ ಸೋಂಕು ಹರಡದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.| ಎಂ. ಯೋಗೇಶ್ವರ, ಅಪರ ಜಿಲ್ಲಾಧಿಕಾರಿ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net