ಹೊಟ್ಟು-ಮೇವಿನ ಕೊರತೆ ಭೀತಿ

9 lxr 1.f
Published on

ಲಕ್ಷ್ಮೇಶ್ವರ: ಶುಕ್ರವಾರ ಸುರಿದ ಮಳೆಯಿಂದ ರೈತರ ಜೀವನಾಧಾರದ ಹಿಂಗಾರಿನ ಬೆಳೆಗಳು, ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಕಾಳುಕಟ್ಟಿದ ಜೋಳ ಸಂಪೂರ್ಣ ನೆಲಕಚ್ಚಿದೆ. ಹೂಭರಿತ ಕಡಲೆ, ಗೋಧಿ, ಸೂರ್ಯಕಾಂತಿ, ಕುಸುಬೆ ಇತರೆ ಬೆಳೆಗಳು ಮಳೆಯಿಂದ ಫಲಕೊಡದಂತಾಗಿವೆ. ಇದರಿಂದ ಹೊಟ್ಟು-ಮೇವಿನ ಕೊರತೆಯಾಗಿ ಜಾನುವಾರುಗಳ ಸಂರಕ್ಷಣೆ ಕಷ್ಟವಾಗಲಿದೆ.

ತಾಲೂಕಿನಲ್ಲಿ 13950 ಹೆಕ್ಟೇರ್ ಜೋಳ, 10000 ಹೆಕ್ಟೇರ್ ಕಡಲೆ, 1230 ಹೆಕ್ಟೇರ್ ಸೂರ್ಯಕಾಂತಿ, 2600 ಚಳಿ ಬಿ.ಟಿ. ಹತ್ತಿ, 705 ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆಯಾಗಿದೆ. ಕೊಯ್ಲು ಹಂತದಲ್ಲಿರುವ ಬೆಳೆಗಳು ಮಳೆಗೆ ಹಾಳಾಗಿರುವುದು ರೈತರನ್ನು ಕಂಗೆಡಿಸಿದೆ.

ಲಕ್ಷ್ಮೇಶ್ವರ, ಗೊಜನೂರ, ಮಾಗಡಿ, ಯಳವತ್ತಿ, ಮಾಢಳ್ಳಿ, ಯಳವತ್ತಿ, ಯತ್ತಿನಹಳ್ಳಿ, ರಾಮಗೇರಿ, ಬೂದಿಹಾಳ, ಕೊಕ್ಕರಗೊಂದಿ, ಸೂರಣಗಿ, ಬಡ್ನಿ, ಅಡರಕಟ್ಟಿ, ದೊಡ್ಡೂರ, ಶಿಗ್ಲಿ ಗ್ರಾಮ ವ್ಯಾಪ್ತಿಯಲ್ಲಿ ಕೊಯ್ಲಿಗೆ ಬಂದ ಬೆಳೆಗಳು ಮಳೆಯಿಂದ ಹಾಳಾಗಿವೆ.

‘ತಿನ್ನಲು ಕಾಳು, ದನಕರುಗಳಿಗೆ ಮೇವಿಗಾಗಿ ಹಿಂಗಾರಿನಲ್ಲಿ ಬೆಳೆ ಬೆಳೆದಿದ್ದೇವೆ. ಎಕರೆಗೆ 10 ಚೀಲ ಜೋಳದ ನಿರೀಕ್ಷೆಯಲ್ಲಿದ್ದೆವು. ಮಳೆ ನಮ್ಮೆಲ್ಲ ನಿರೀಕ್ಷೆಗಳನ್ನು ನುಚ್ಚುನೂರು ಮಾಡಿದೆ. ಮುಂಗಾರಿನ ಬೆಳೆ ಹಾನಿ ಪರಿಹಾರವೇ ಬಂದಿಲ್ಲ. ಮುಂದೇನು ಎಂಬ ಚಿಂತೆ ಕಾಡುತ್ತಿದೆ’ ಎಂದು ಲಕ್ಷ್ಮೇಶ್ವರದ ರೈತರಾದ ರುದ್ರಪ್ಪ ಆದಿ, ಬಸವರಾಜ ಮೆಣಸಿನಕಾಯಿ, ಅಡರಕಟ್ಟಿಯ ರವಿ ಹವಳದ, ಪ್ರಕಾಶ ಶಿರಹಟ್ಟಿ, ಬಡ್ನಿಯ ಭರಮಪ್ಪ ಕಂಬಳಿ, ಯಳವತ್ತಿಯ ಬಾಪುಗೌಡ ಪಾಟೀಲ ಅಲವತ್ತುಕೊಂಡರು.

ಮನೆಗಳಿಗೆ ನುಗ್ಗಿದ ನೀರು: ಮಳೆಯಿಂದ ಚರಂಡಿಗಳು ತುಂಬಿ ತ್ಯಾಜ್ಯ ನೀರು ರಸ್ತೆಗೆ ನುಗ್ಗಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತು. ಪಟ್ಟಣದ ಹಾವಳಿ ಹನಮಂತ ದೇವಸ್ಥಾನದ ಪ್ರದೇಶ, ವಿದ್ಯಾರಣ್ಯ ವೃತ್ತ, ಶಿಗ್ಲಿ ನಾಕಾ, ಪಂಪ ವೃತ್ತ, ಕೆವಿಜಿ ಬ್ಯಾಂಕ್ ಹತ್ತಿರದ ಹುಬ್ಬಳ್ಳಿ ರಸ್ತೆ, ಸರಾಫ್ ಬಜಾರ ಸೇರಿ ಅನೇಕ ಕಡೆ ರಸ್ತೆಯ ಮೇಲೆ ತಾಜ್ಯ ಹರಿದು ಬಂದು ಸಂಚಾರಕ್ಕೆ ಅಡ್ಡಿಯಾಯಿತು. ಶುಕ್ರವಾರ ಸಂತೆ ದಿನವಾದ್ದರಿಂದ ವ್ಯಾಪಾರಸ್ಥರು ಅಳಿದುಳಿದ ತರಕಾರಿ, ತ್ಯಾಜ್ಯ ಅಲ್ಲೇ ಬಿಟ್ಟು ಹೋದರು. ಮಳೆ ನೀರಿನೊಂದಿಗೆ ಹರಿದು ಬಂದ ತ್ಯಾಜ್ಯದಿಂದ ಅಲ್ಲಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾದ ಪ್ರದೇಶವನ್ನು ಬೆಳಗ್ಗೆ ಪುರಸಭೆಯವರು ಸ್ವಚ್ಛಗೊಳಿಸಲು ಹರಸಾಹಸ ಪಡಬೇಕಾಯಿತು. ಪುರಸಭೆ ಅಧಿಕಾರಿಗಳು, ಪೌರ ಕಾರ್ವಿುಕರಿಂದ ತ್ಯಾಜ್ಯ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.

ಅಕಾಲಿಕ ಮಳೆಯಿಂದ ತಾಲೂಕಿನಾದ್ಯಂತ ಬೆಳೆಗಳು ಹಾಳಾಗಿರುವುದನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ಕಳುಹಿಸಲಾಗುವುದು. ರೈತರು ಮೊಬೈಲ್ ಆಪ್ ಮೂಲಕ ಹಿಂಗಾರಿನ ಬೆಳೆ ಸಮೀಕ್ಷೆ ವರದಿ ದಾಖಲಿಸಬೇಕು. |ಮಹೇಶಬಾಬು ಎಂ.ಎಸ್., ಕೃಷಿ ಸಹಾಯಕ ನಿರ್ದೇಶಕ, ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net