

ನಂದಗುಡಿ: ಈ ಬಾರಿ ಉತ್ತಮ ಮಳೆಯಾಗಿ, ಬೆಳೆಯೂ ಸೋಂಪಾಗಿ ಬಂದಿದೆ. ಇದರಿಂದಾಗಿ ಕಳೆದೆರಡು ವರ್ಷಗಳ ಅನಾವೃಷ್ಟಿಯಿಂದ ಉಂಟಾಗಿದ್ದ ಸಂಕಷ್ಟ ದೂರಾಗುವ ಆಸೆ ರೈತರ ಮೊಗದಲ್ಲಿ ಚಿಗಿತಿತ್ತು. ಆದರೆ, ಈ ಬಾರಿ ರಾಗಿ ಸಲು ಕಟಾವಿನ ಆರಂಭಿಕ ಹಂತದಲ್ಲೇ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಭಾರಿ ತೊಂದರೆಯಾಗಿದೆ.
ಈ ವರ್ಷ ರೈತರು ಹೆಚ್ಚಾಗಿ ರಾಗಿ ಬೆಳೆದಿದ್ದಾರೆ. ಕಟಾವಿನವರೆಗೂ ಹಂತ ಹಂತವಾಗಿ ಮಳೆಯಾದ ಕಾರಣ ಉತ್ತಮ ಇಳುವರಿಯೂ ಬಂದಿದೆ. ಕಟಾವಿನ ಸಂದರ್ಭದಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ರಾಗಿ ತೆನೆಯಲ್ಲಿ ಮೊಳಕೆ ಆಗುವ ಭೀತಿ ಉಂಟಾಗಿದೆ. ಕೆಲವೆಡೆ ಎತ್ತರಕ್ಕೆ ಬೆಳೆದಿದ್ದ ರಾಗಿ ಗಾಳಿ ಮಳೆಗೆ ನೆಲಕಚ್ಚಿ ಸಾಕಷ್ಟು ಹಾನಿಯಾಗಿದೆ.
ಬಹತೇಕ ರೈತರು ಮಳೆ ಆಶ್ರಿತ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ನಾಟಿ ಮಾಡಿದ್ದರು. ಆದರೆ ಸತತ ಮಳೆ ತುತ್ತು ಬಾಯಿಗೆ ಬರದಂತೆ ಮಾಡುತ್ತಿದೆ.
ಸತತ ಮಳೆಯಿಂದಾಗಿ ಮನೆಯ ಆಸುಪಾಸಿನಲ್ಲಿ ಕೂಡ ರಾಗಿಯನ್ನು ಒಣಗಿಸಲು ಸಾಧ್ಯವಿಲ್ಲವಾಗಿದೆ. ಜಿಟಿಜಿಟಿ ಮಳೆಯ ನೀರು ರಾಗಿ ತೆನೆಗಳಲ್ಲಿ ಇಳಿದು ತೇವಾಂಶ ಹೆಚ್ಚಿಸುತ್ತಿರುವುದು ಬೆಳೆಗಾರನ ಆತಂಕಕ್ಕೆ ಕಾರಣವಾಗಿದೆ.
ತಡವಾಗಿ ಬಿತ್ತನೆ ಮಾಡಿದವರಿಗೂ ನಷ್ಟ: ತಡವಾಗಿ ಬಿತ್ತನೆ ಮಾಡಿರುವ ರೈತರ ಹೊಲಗಳಲ್ಲಿ ಬೆಳೆ ಇನ್ನೂ ಕೊಯ್ಲು ಆಗಿಲ್ಲ. ಇದರಿಂದಾಗಿ ಒಂದಷ್ಟು ಪ್ರಮಾಣದ ನಷ್ಟ ಸಂಭವಿಸುವ ಸಾಧ್ಯತೆಯಿದೆ.
ಬೆಳೆ ವಿಮೆ ಪಡೆಯುವಂತೆ ಪ್ರತಿಯೊಬ್ಬ ರೈತನಿಗೂ ತಿಳಿಸಲಾಗಿತ್ತು. ಈ ರೀತಿ ಹವಾಮಾನ ವೈಪರೀತ್ಯ ಉಂಟಾದಾಗ ಅದರಿಂದ ಅನುಕೂಲವಾಗುತ್ತಿತ್ತು. ನಿರಂತರವಾಗಿ ಇನ್ನೂ ಮೂರ್ನಾಲ್ಕು ದಿನ ಮಳೆಯಾದರೆ, ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು. ಕೆ.ವಿ. ನಾಗರಾಜ್, ಹೊಸಕೋಟೆಯ ಸಹಾಯಕ ಕೃಷಿ ನಿರ್ದೇಶಕ ಈಗಾಗಲೇ ಅರ್ಧ ಭಾಗದಷ್ಟು ರಾಗಿ ಕಟಾವಿಗೆ ಸಿದ್ದವಾದಗಿದೆ. ಉಳಿದರ್ಧ ಭಾಗ ಹಾಗೆಯೇ ಇದೆ. ಮಳೆ ನಿಲ್ಲದಿದ್ದರೆ ತನೆಗಳು ಮೊಳೆಯೊಡೆಯುವ ಸಾಧ್ಯತೆ ಇದೆ. ಇದರಿಂದ ಭಾರಿ ನಷ್ಟವಾಗಲಿದೆ. ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ಫ್ರಭಾಕರ, ಗಿಡ್ನಹಳ್ಳಿ ರೈತ