

ಬೇಲೂರು: ತಾಲೂಕಿನಾದ್ಯಂತ ಸೋಮವಾರದಿಂದ ಇಲ್ಲಿವರೆಗೂ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಬೇಲೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಜನಜೀವನ ಅಸ್ತವ್ಯಸ್ತವಾಗಿದೆಯಲ್ಲದೆ, ರೈತರು ಬೆಳೆದ ಬೆಳೆ ಕೈ ತಪ್ಪುವ ಆತಂಕದಲ್ಲಿದ್ದಾರೆ.
ತಾಲೂಕಿನಲ್ಲಿ ಕಳೆದ ಮುಂಗಾರಿನಲ್ಲಿ ಬಂದ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿ ರೈತರೆಲ್ಲ ಜಮೀನಿನತ್ತ ಮುಖ ಮಾಡಿ ಉತ್ತಮವಾಗಿ ಬೆಳೆ ಬೆಳೆದಿದ್ದರು. ಆದರೆ ಕಳೆದ ಸೋಮವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾದರೆ, ಮುಂದೇನು ಗತಿ ಎಂದು ರೈತರು ಯೋಚಿಸುವಂತಾಗಿದೆ. ಈಗ ಬರುತ್ತಿರುವ ಮಳೆಯಿಂದ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ. ಕೆಲ ಸಮಯ ಬಿಡುವು ನೀಡುತ್ತಿದ್ದ ಮಳೆ ಮತ್ತೆ ಪ್ರಾರಂಭವಾಗುತಿತ್ತು. ವಿವಿಧ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಆಗಮಿಸಿದ್ದ ಜನತೆ ಮಳೆಯ ನಡುವೆಯೇ ನೆನೆದುಕೊಂಡೇ ಓಡಾಡುತ್ತಿದ್ದರು.
ಜತೆಗೆ ಮಳೆ ಬಿಡುವು ನೀಡದ ಕಾರಣ ಗಂಟೆಗಟ್ಟಲೇ ನಿಂತಲ್ಲೇ ನಿಲ್ಲುವಂತಾಗಿತ್ತು. ಇಷ್ಟೇ ಅಲ್ಲದೆ ಮಲೆನಾಡು ಬಾಗಗಳಲ್ಲಂತೂ ಮನೆಯಿಂದ ಯಾರೂ ಹೊರ ಬಾರದಂತಾಗಿದೆ. ಕೆಲ ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ರೋಸಿ ಹೋಗಿದ್ದು, ಬೆಳೆದಿರುವ ಬೆಳೆ ಕೈ ತಪ್ಪುವ ಮುನ್ನ ಹೇಗೆ ಉಳಿಸಿಕೊಳ್ಳುವುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.