ನಿರಾಶ್ರಿತರ ಕೇಂದ್ರಗಳಲ್ಲಿ ಸೋಂಕು ಭೀತಿ

nirastritha 20 mar 20
Published on

ಬೆಂಗಳೂರು: ಲಾಕ್​ಡೌನ್ ಸನ್ನಿವೇಶದಿಂದ ನಗರದ ಕೆಲವು ನಿರಾಶ್ರಿತರ ಕೇಂದ್ರಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರಿಗೆ ಆಶ್ರಯ ನೀಡಲಾಗುತ್ತಿದ್ದು, ಸೋಂಕು ತಗಲುವ ಭೀತಿ ಎದುರಾಗಿದೆ.

ಬಿಬಿಎಂಪಿ ಸಮೀಕ್ಷೆಯಂತೆ ಅಂದಾಜು 5 ಸಾವಿರ ನಿರಾಶ್ರಿತರು ಬೀದಿಗಳಲ್ಲಿ ಮಲಗುತ್ತಾರೆ ಎಂದು ಗುರುತಿಸಲಾಗಿದೆ. ಅವರಿಗೆ ಆಶ್ರಯ ನೀಡಲು ನಿರಾಶ್ರಿತರ 9 ಕೇಂದ್ರಗಳನ್ನು ಪಾಲಿಕೆ ತೆರೆದಿದ್ದು, ಅವುಗಳ ನಿರ್ವಹಣೆಗೆ ಇಂಪ್ಯಾಕ್ಟ್ ಇಂಡಿಯಾ ಕನ್ಸಾರ್ಟಿಯಂ, ಡ್ರೀಮ್್ಸ ಇಂಡಿಯಾ ಹಾಗೂ ವಿದ್ಯಾರಣ್ಯ ಸಂಸ್ಥೆಗಳು ನೆರವಾಗುತ್ತಿವೆ.

ಗೃಹಬಂಧನಕ್ಕೆ ಸ್ಥಳವಿಲ್ಲ: ಗೂಡ್ಸ್​ಶೆಡ್ ರಸ್ತೆಯಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಕರೊನಾ ಸೋಂಕಿನ ಜ್ವರ, ಕೆಮ್ಮು ಲಕ್ಷಣವಿರುವ ಮೂವರನ್ನು ತಂದು ಬಿಡಲಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿ ಸಲಾಗಿದ್ದು, ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್​ಗೆ ಸ್ಥಳವಿಲ್ಲದ ಕಾರಣ ಅಲ್ಲಿಯೇ ಪಾಲಿಕೆ ಅಧಿಕಾರಿಗಳು ಬಿಟ್ಟು ಹೋಗಿದ್ದಾರೆ. ಅವರನ್ನು ಕೇಂದ್ರದ ಮಾಳಿಗೆ ಮೇಲೆ ಪ್ರತ್ಯೇಕವಾಗಿ ಮಲಗಿಸಲಾಗಿದೆ ಎಂದು ಇಂಪ್ಯಾಕ್ಟ್ ಇಂಡಿಯಾ ಕನ್ಸಾರ್ಟಿ ಯಂನ ಸಂಚಾಲಕ ಡಾ. ಸಂಪತ್ ತಿಳಿಸಿದ್ದಾರೆ.

ನಿರಾಶ್ರಿತರ ಕೇಂದ್ರದ ಬಗ್ಗೆ ಮಾಹಿತಿಯಿಲ್ಲ: ಕೃ.ರಾ. ಮಾರುಕಟ್ಟೆ, ಉಪ್ಪಾರಪೇಟೆ, ಮೆಜೆಸ್ಟಿಕ್, ಯಶವಂತಪುರ, ಶಿವಾಜಿನಗರ, ರೈಲು ನಿಲ್ದಾಣ, ಗಾಂಧಿನಗರ, ಚಿಕ್ಕಪೇಟೆ, ಹೆಮ್ಮಿಗೆಪುರ, ರಾಜಾಜಿನಗರ, ಜೀವನ್​ಬಿಮಾನಗರ, ಜಗಜೀವನ ರಾಮ್ ನಗರ ಸೇರಿ ವಿವಿಧೆಡೆ ಹೆಚ್ಚು ನಿರಾಶ್ರಿತರಿದ್ದಾರೆ. ನಿರಾಶ್ರಿತರ ಕೇಂದ್ರದ ಬಗ್ಗೆ ಇವರಿಗೆ ಮಾಹಿತಿಯೇ ಇಲ್ಲ. ಈಗಾಗಲೇ ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಿದೇಶ ಪ್ರಯಾಣ ಮಾಡದವರಿಗೂ ಕರೊನಾ ಸೋಂಕು ತಗುಲಿದೆ. ಅದೇ ರೀತಿಯಲ್ಲಿ ಬೀದಿಯಲ್ಲಿರುವ ನಿರಾಶ್ರಿತರೂ ಕೂಡ ಸೋಂಕಿನ ಭೀತಿ ಎದುರಿಸುವಂತಾಗಿದೆ.

ಲಾಕ್​ಡೌನ್​ನಿಂದ ನಿರಾಶ್ರಿತರ ಸಂಖ್ಯೆ ಹೆಚ್ಚಳ: ಈಗಾಗಲೇ ನಗರದಲ್ಲಿ ನಿರಾಶ್ರಿತರ ಸಂಖ್ಯೆ 5 ಸಾವಿರ ಇದ್ದು, ಈಗ ಲಾಕ್​ಡೌನ್ ಜಾರಿಯಲ್ಲಿರುವ ಕಾರಣ ಕೂಲಿ, ಕಟ್ಟಡ ಕಾರ್ವಿುಕರು, ಮಾರುಕಟ್ಟೆಗಳಲ್ಲಿ ಸಣ್ಣ ಪುಟ್ಟ ಹಮಾಲಿ ಕೆಲಸ ಮಾಡುತ್ತಿದ್ದವರು ಸಂಪೂರ್ಣ ಬೀದಿಗೆ ಬಿದ್ದಿದ್ದಾರೆ. ಅವರೂ ನಿರಾಶ್ರಿತರಾಗಿದ್ದು, ಬೀದಿಗಳಲ್ಲಿ ಮಲಗುವಂತಾಗಿದೆ. ಕೆಲವರು ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಅಂಡರ್ ಪಾಸ್​ಗಳು, ಮೇಲ್ಸೇತುವೆಗಳ ಕೆಳಭಾಗದಲ್ಲಿ ಉಳಿದುಕೊಂಡಿದ್ದು, ಇಂದಿರಾ ಕ್ಯಾಂಟೀನ್ ಊಟದ ಮೇಲೆ ಅವಲಂಬಿತರಾಗಿದ್ದಾರೆ.

ಇಂದಿರಾ ಕ್ಯಾಂಟೀನ್ ಊಟ: ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವ ವ್ಯಕ್ತಿಗಳಲ್ಲಿ ಕೆಲಸ ಮಾಡಲು ಸಾಮರ್ಥ್ಯವಿಲ್ಲದ ಶೇ.10 ಜನರಿಗೆ ಮಾತ್ರ ಊಟ ನೀಡುವ ವ್ಯವಸ್ಥೆಯಿತ್ತು. ಆದರೆ, ಈಗ ಲಾಕ್​ಡೌನ್ ಆದೇಶದಿಂದ ಕೆಲಸ ಸಿಗದ ಕಾರಣ ಇಂದಿರಾ ಕ್ಯಾಂಟೀನ್ ಊಟ ಸರಬರಾಜು ಮಾಡಲಾಗುತ್ತಿದೆ. ಬಹುತೇಕ ಜನ ಹಗಲಿನಲ್ಲಿ ಮೈದಾನಗಳು, ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದು ರಾತ್ರಿ ವೇಳೆ ನಿರಾಶ್ರಿತರ ಕೇಂದ್ರಕ್ಕೆ ಬಂದು ಮಲಗುತ್ತಿದ್ದಾರೆ.

ಉಪ್ಪಾರಪೇಟೆಯಲ್ಲಿ 126 ನಿರಾಶ್ರಿತರು

ಪಾಲಿಕೆ ಆರಂಭಿಸಿರುವ 9 ನಿರಾಶ್ರಿತರ ಕೇಂದ್ರಗಳು 50 ಜನ ತಂಗುವ ಸಾಮರ್ಥ್ಯ ಹೊಂದಿವೆ. ಇದರಲ್ಲಿ 500 ಜನರು (ಒಟ್ಟು ನಿರಾಶ್ರಿತರ ಶೇ.10) ಮಾತ್ರ ಉಳಿದುಕೊಳ್ಳಬಹುದು.ಆದರೆ ಈಗಿರುವ ಕೆಂದ್ರಗಳ ಬಗ್ಗೆ ನಿರಾಶ್ರಿತರಿಗೆ ಮಾಹಿತಿಯಿಲ್ಲದೆ ಬೀದಿಯಲ್ಲಿ ಮಲಗುತ್ತಾರೆ. ಲಾಕ್​ಡೌನ್​ನಿಂದ ಪಾಲಿಕೆ ಸಿಬ್ಬಂದಿ ನಿರಾಶ್ರಿತರನ್ನು ಗೂಡ್ಸ್ ಶೆಡ್ ರಸ್ತೆ, ಯಶವಂತಪುರ ಹಾಗೂ ಉಪ್ಪಾರಪೇಟೆ ನಿರಾಶ್ರಿತರ ಕೇಂದ್ರಕ್ಕೆ ತಂದು ಬಿಡುತ್ತಿದೆ. ಉಪ್ಪಾರಪೇಟೆ ಕೇಂದ್ರದಲ್ಲೇ 126 ಜನ ಆಶ್ರಯ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net