

ಶಿವಮೊಗ್ಗ: ಕೊಳೆ, ಎಲೆ ಚುಕ್ಕೆ ರೋಗದಿಂದ ಫಸಲು ಕಳೆದುಕೊಂಡು ಆತಂಕದಲ್ಲಿರುವ ಅಡಕೆ ಬೆಳೆಗಾರರಿಗೆ ಈಗ ಮಾರುಕಟ್ಟೆ ಅಸ್ಥಿರತೆ ಎದುರಾಗಿದೆ. ಈ ವರ್ಷದ ಫಸಲು ಕೈ ಸೇರಲು ಇನ್ನು ಕೆಲ ತಿಂಗಳು ಬಾಕಿ ಇರುವಾಗ ಅಡಕೆ ಬೆಳೆಗಾರ ನಷ್ಟದ ಭೀತಿಗೆ ಸಿಲುಕಿದ್ದಾನೆ.
ಎರಡು ತಿಂಗಳಿನಿಂದ ಮಲೆನಾಡಿನ ರಾಶಿ ಅಡಕೆ ಬೆಲೆ ಇಳಿಮುಖವಾಗುತ್ತಿದೆ. ಕ್ವಿಂಟಾಲ್‌ಗೆ ಗರಿಷ್ಠ 54 ಸಾವಿರ ರೂ. ತಲುಪಿದ್ದ ಅಡಕೆ ಈಗ 49 ಸಾವಿರ ರೂ.ಗೆ ಇಳಿದಿದೆ. ಅರೆ ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಈಗಾಗಲೇ ಅಡಕೆ ಸಂಸ್ಕರಣೆ ಮುಗಿದು ಮಾರುಕಟ್ಟೆಗೆ ಪೂರೈಕೆಯಾಗಿದೆ. ಇದು ಅಡಕೆ ಬೆಲೆ ಇಳಿಕೆಗೆ ಮೂಲ ಕಾರಣ ಎನ್ನಲಾಗುತ್ತಿದೆ.
ಇಷ್ಟು ದಿನ ಕಳಪೆ ಅಡಕೆ ಆಮದಾಗುತ್ತಿದೆ ಎಂಬ ಕೂಗು ಜೋರಾಗಿತ್ತು. ಆದರೆ ಈಗ ಮಲೆನಾಡಿಂದ ಉತ್ತರ ಭಾರತದ ಗುಟ್ಖಾ ಕಂಪನಿಗಳಿಗೆ ಪೂರೈಕೆಯಾಗುತ್ತಿರುವ ಅಡಕೆಯೇ ಕಳಪೆ ಎಂಬ ವಾದ ಕೇಳಿ ಬರುತ್ತಿದೆ. ಈಗ ಉಂಟಾಗಿರುವ ವಿಚಿತ್ರ ಸ್ಥಿತಿಯಿಂದ ಮ್ಯಾಮ್ಕೋಸ್‌ನಂತಹ ಸಹಕಾರ ಸಂಸ್ಥೆಗಳಿಗೆ ಆರ್ಥಿಕ ಹೊಡೆತ ಬೀಳುವ ಅಪಾಯವಿದೆ.
ಉತ್ಕೃಷ್ಟ ಮಟ್ಟದ, ಮಲೆನಾಡಿನ ಬ್ರಾೃಂಡ್ ಆಗಿರುವ ಸರಕು ಗರಿಷ್ಠ 88 ಸಾವಿರ ರೂ. ಇದೆ. ಅಡಕೆ ಸಂಸ್ಕರಣೆಯಲ್ಲಿ ಯಾಂತ್ರೀಕರಣದ ಬಳಕೆಯಿಂದ ಸರಕು ಉತ್ಪಾದನೆ ಕುಸಿದಿರುವುದು ಇದಕ್ಕೆ ಮುಖ್ಯ ಕಾರಣ. ಈಗ ಮಲೆನಾಡಿನ ಅಡಕೆ ಎಂದರೆ ರಾಶಿ ಇಡಿ ಮಾತ್ರ ಎನ್ನುವಂತಾಗಿದೆ.
ತೆರಿಗೆ ಕಳ್ಳತನ ಮಾಡಿ ನೇರವಾಗಿ ಉತ್ತರ ಭಾರತಕ್ಕೆ ಅಡಕೆ ರವಾನಿಸುವ ಮಧ್ಯವರ್ತಿಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಅಪರೂಪಕ್ಕೊಮ್ಮೆ ತೆರಿಗೆ ಇಲಾಖೆಯವರು ಗದಾ ಪ್ರಹಾರ ಮಾಡಿದರೂ ತೆರಿಗೆ ತಪ್ಪಿಸುವ ವಂಚಕರನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಸಾಧ್ಯವಾಗುತ್ತಿಲ್ಲ.
ರೈತರಿಂದ ಸಮಸ್ಯೆಯಿಲ್ಲ: ಅಡಕೆ ಗುಣಮಟ್ಟ ಕುಸಿಯುವುದಕ್ಕೆ ಬೆಳೆಗಾರರು ಕಾರಣರಲ್ಲ. ನಾವು ಸಂಸ್ಕರಿಸುವ ಅಡಕೆಗೆ ಗುಣಮಟ್ಟ ಇಲ್ಲದೇ ಹೋದರೆ ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೆಲೆ ಸಿಗುವುದಿಲ್ಲ ಎಂಬ ಸರಳ ಸತ್ಯ ಬೆಳೆಗಾರರಿಗೆ ತಿಳಿಯದ್ದೇನಲ್ಲ. ಇದಕ್ಕೆ ನೇರ ಕಾರಣ ಕೆಲ ಆಸೆಬುರುಕ ಮಧ್ಯವರ್ತಿಗಳು. ಬೆಳೆಗಾರರಿಗೆ ನೇರವಾಗಿ ಮನೆ ಬಾಗಿಲಲ್ಲೇ ಅಡಕೆ ಖರೀದಿಸುವವರ ಪೈಕಿ ಕೆಲವರು ಮಾಡುವ ಕುತಂತ್ರವೇ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಒಂದಿಲ್ಲೊಂದು ತೊಂದರೆ: ಒಂದೂವರೆ ದಶಕದಲ್ಲಿ ಅಡಕೆ ಬೆಳೆಯುವ ಪ್ರದೇಶದ ವ್ಯಾಪ್ತಿ ವಿಸ್ತಾರಗೊಂಡಿದೆ. ಮಲೆನಾಡು, ಕರಾವಳಿ ಭಾಗಗಳಿಗೆ ಸೀಮಿತವಾಗಿದ್ದ ಅಡಕೆ ಇಂದು ಅರ್ಧ ಕರ್ನಾಟಕಕ್ಕೇ ವಿಸ್ತಾರಗೊಂಡಿದೆ. ಇದರ ಸುತ್ತ ದೊಡ್ಡ ಆರ್ಥಿಕತೆ ನಿರ್ಮಾಣವಾಗಿದೆ. ಆರಂಭದಲ್ಲಿ ಗುಟ್ಖಾ ನಿಷೇಧ ಗುಮ್ಮ ಅಡಕೆಯನ್ನು ಇನ್ನಿಲ್ಲದಂತೆ ಕಾಡಿತು. ಹತ್ತು ವರ್ಷಗಳ ಹಿಂದೆ ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ವಿಷಯ ಹೈಕೋರ್ಟ್ ಮೆಟ್ಟಿಲೇರಿದ್ದು, ಇನ್ನು ವಿಚಾರಣೆ ನಡೆಯುತ್ತಿದೆ. ಅದರ ನಡುವೆ ಸಾರ್ಕ್ ಒಪ್ಪಂದದ ಪರಿಣಾಮ ಅಪಾರ ಪ್ರಮಾಣದ ಕಳಪೆ ಅಡಕೆ ಆಮದಾಯಿತು. ಹೀಗೆ ನಿರಂತರವಾಗಿ ಮಾರುಕಟ್ಟೆ ಅಸ್ಥಿರಗೊಳ್ಳುವ ಸಂಗತಿಗಳು ಘಟಿಸಿದ ಪರಿಣಾಮ ಬೆಳೆಗಾರರು ಆತಂಕ ಎದುರಿಸುವಂತಾಗಿದೆ.
ಆರ್ಥಿಕ ವ್ಯವಸ್ಥೆಗೆ ಹೊಡೆತ: ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಭಾಗದ ಅಡಕೆ ಮಾರುಕಟ್ಟೆಗೆ ಬರಲು ಇನ್ನು ನಾಲ್ಕು ತಿಂಗಳು ಬೇಕು. ಅಷ್ಟರೊಳಗೆ ಧಾರಣೆ ಸ್ಥಿರತೆಯತ್ತ ಸಾಗಿದರೆ ಬೆಳೆಗಾರ ಬಚಾವ್. ಇಲ್ಲದಿದ್ದರೆ ಕೈ ಸುಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಈ ವರ್ಷ ಸತತ ಮಳೆ ಪರಿಣಾಮ ಬಹುತೇಕ ಕಡೆಗಳಲ್ಲಿ ಕೊಳೆ ರೋಗ ವ್ಯಾಪಕವಾಗಿತ್ತು. ಹೀಗಾಗಿ ನಿರೀಕ್ಷಿತ ಪ್ರಮಾಣದ ಫಸಲು ಕೈ ಸೇರುವ ಸಾಧ್ಯತೆಗಳಿಲ್ಲ. ಇನ್ನೊಂದೆಡೆ ಅಡಕೆ ಮಾರುಕಟ್ಟೆಯಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲವು ದೊಡ್ಡ ವಹಿವಾಟುದಾರರನ್ನು ಹೊರತುಪಡಿಸಿದರೆ ಅನೇಕ ವರ್ತಕರು ಈಗಾಗಲೇ ಅಡಕೆ ಖರೀದಿ ಮೇಲೆ ಸಾಕಷ್ಟು ಹೂಡಿಕೆ ಮಾಡಿ ಕಂಗಾಲಾಗಿದ್ದಾರೆ. ಕಾಣದ ಕೈಗಳು ಮಾಡುವ ಮೋಸದಾಟಕ್ಕೆ ದೊಡ್ಡ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗುವ ಅಪಾಯವಿದೆ.