

ಬೆಂಗಳೂರು: ರಸ್ತೆ ಬದಿಯ ಚರಂಡಿಯಲ್ಲಿ ಕೊಳಚೆ ನೀರು ಸರಿಯಾಗಿ ಹರಿದು ಹೋಗದೆ, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ಗೊಟ್ಟಿಗೆರೆ ವಾರ್ಡ್ನಲ್ಲಿ ನಿರ್ಮಾಣವಾಗಿದೆ. ಕೊಳಚೆ ನೀರು ಸರಿಯಾಗಿ ವಿಲೇವಾರಿಯಾಗದೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಮಳೆ ನೀರು ಹರಿದು ಹೋಗಬೇಕಾದ ಚರಂಡಿಯಲ್ಲಿ ಕೊಳಚೆ ನೀರು ಹರಿದು ಹೋಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಹಾಗೂ ಒಳಚರಂಡಿ ಮಂಡಳಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧ ಪಟ್ಟವರು ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗೊಟ್ಟಿಗೆರೆ ವಾರ್ಡ್ನ ನಿವಾಸಿಗಳು ಆಗ್ರಹಿಸಿದ್ದಾರೆ.
ಒಂದು ವರ್ಷದ ಹಿಂದೆ ಒಳಚರಂಡಿ ಮಂಡಳಿಗೆ ಸಮಸ್ಯೆ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದೆವು. ಬಳಿಕ ಅಧಿಕಾರಿಗಳು ಬಂದು ಪರಿಸ್ಥಿತಿಯನ್ನು ಪರಿಶೀಲಿಸಿದರು. ಆದರೆ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಆರಂಭದಲ್ಲಿ, ನಮ್ಮ ಮನೆಯ ಸಮೀಪವಿರುವ ತೆರೆದ ಪ್ಲಾಟ್ಗೆ ಕೊಳಚೆ ನೀರನ್ನು ಬಿಡಲಾಗುತ್ತಿತ್ತು. ಆದರೆ ಹೆಚ್ಚಿನ ನೀರು ಹರಿಯಲು ಯಾವುದೇ ಸ್ಥಳಾವಕಾಶವಿಲ್ಲ. ಒಳಚರಂಡಿಯ ಕೊನೆಯಲ್ಲಿ ಗೋಡೆಯಿದ್ದು, ಚರಂಡಿಯನ್ನು ರ್ನಿಬಂಧಿಸಲಾಗಿದೆ. ಹೀಗಾಗಿ ಕೊಳಚೆನೀರು ಮುಂದೆ ಹರಿಯಲು ಸ್ಥಳಾವಕಾಶವಿಲ್ಲ. ಸರಿಯಾದ ಚರಂಡಿ ಇಲ್ಲದ ಕಾರಣ ನಮ್ಮ ಮನೆಗಳ ಸುತ್ತ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆಗಳ ಕಾಟ ಮತ್ತು ಕೆಟ್ಟ ವಾಸನೆ ಬರುತ್ತಿದೆ ಎಂದು ಗೊಟ್ಟಿಗೆರೆ ನಿವಾಸಿ ವಿನೀಲಾ ತಿಳಿಸಿದ್ದಾರೆ.
ಗೊಟ್ಟಿಗೆರೆ ಭಾಗದಲ್ಲಿ ಮಳೆ ನೀರು ಹರಿದು ಹೋಗಬೇಕಾದ ಚರಂಡಿಯಲ್ಲಿ ತ್ಯಾಜ್ಯಗಳೇ ತುಂಬಿಕೊಂಡಿದೆ. ಇದು ದುರ್ವಾಸನೆ ಹರಡಿಕೊಳ್ಳಲು ಕಾರಣವಾಗಿದೆ. ಏಕಾಏಕಿ ಮಳೆ ಬಂದರೆ, ನೀರು ಹರಿದು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ.
- ಶಾಂತೇಶ್, ಬೇಗೂರು ನಿವಾಸಿ
ತ್ಯಾಜ್ಯಗಳು ತುಂಬಿಕೊಂಡಿರುವುದರಿಂದ ಚರಂಡಿ ಮುಚ್ಚಿ ಹೋಗಿವೆ. ಪರಿಣಾಮ ನೀರು ಹರಿದು ಹೋಗಲು ಸಾಧ್ಯವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ನಿಯಮಿತವಾಗಿ ಪರಿಶೀಲನೆ ನಡೆಸಿ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು. ಜತೆಗೆ ಅಡೆತಡೆಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು. ಚರಂಡಿಗೆ ತ್ಯಾಜ್ಯ ಎಸೆದು ನಿಯಮ ಉಲ್ಲಂಘಿಸುವವ ವಿರುದ್ಧ ದಂಡ ವಿಧಿಸುವ ಕ್ರಮ ಆಗಬೇಕು.
- ಪೊಂಗೊತೈ ಪರಮಶಿವಂ, ಸ್ಥಳಿಯ ನಾಯಕ