

ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮದಲ್ಲಿ ಹಲವು ವರ್ಷಗಳಿಂದ ನೆಮ್ಮದಿಯಿಂದ ಬದುಕುತ್ತಿರುವ ಕುಟುಂಬಗಳು ಈಗ ಬೀದಿಗೆ ಬೀಳುವ ಭೀತಿಯಲ್ಲಿವೆ. ಸರ್ಕಾರದ ಭೂಕಬಳಿಕೆ ನಿಷೇಧ ಕಾಯ್ದೆಯಡಿ ಗ್ರಾಮದ 35 ಜನರಿಗೆ ನೋಟಿಸ್ ಬಂದಿದ್ದು, ಆತಂಕ ಮನೆ ಮಾಡಿದೆ.
ಗ್ರಾಮದ ನಿರಾಶ್ರಿತರಿಗೆ ಆಶ್ರಯ ಯೋಜನೆಯಡಿ 1991ರಲ್ಲಿ ಸರ್ಕಾರದಿಂದ ನಿವೇಶನ ಹಕ್ಕು ಪತ್ರ ನೀಡಲಾಗಿತ್ತು. ಉಚಿತವಾಗಿ ಗೋವನಾಳ ಗ್ರಾಮದ ಗಾಂವಠಾಣಾದಲ್ಲಿ 14 ಕುಟುಂಬಗಳಿಗೆ ನಿವೇಶನ ಹಂಚಲಾಗಿತ್ತು. ವಿಪರ್ಯಾಸವೆಂದರೆ ಅವರಿಗೆ ಗುರುತಿಸಿರುವ ನಿವೇಶನ ಸರ್ಕಾರಿ ಕುಡಿಯುವ ನೀರಿನ ಕೆರೆ (ಸಾರ್ವಜನಿಕ) ಜಾಗವಾಗಿದೆ. ಇದರಿಂದ ಈಗ ಸಮಸ್ಯೆ ಎದುರಾಗಿದೆ.
33 ವಷರ್ಗಳಿಂದ ಅನೇಕ ಕುಟುಂಬಗಳು ಈ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿವೆ. ಈ ಕುಟುಂಬಗಳಿಗೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು, ವಿದ್ಯುತ್ ಸೇರಿ ಮೂಲಸೌಕರ್ಯಗಳ ಜತೆಗೆ ಮನೆ ಉತಾರ ಗ್ರಾಪಂನಿಂದ ಮಾಡಿ ಕೊಡಲಾಗಿದೆ. ಈಗ ಭೂಕಬಳಿಕೆ ಕಾಯ್ದೆಯಡಿ ಜಾಗ ತೆರವಿಗೆ ನೋಟಿಸ್ ನೀಡಿದ್ದು ಆಘಾತ ಉಂಟು ಮಾಡಿದೆ. ನ್ಯಾಯಾಲಯದಿಂದ ಸಮನ್ಸ್ ಹಾಗೂ ಅರೆಸ್ಟ್ ವಾರೆಂಟ್ ಸಹ ಹೊರಡಿಸಿದ್ದರಿಂದ ನಿವಾಸಿಗಳಿಗೆ ದಿಕ್ಕು ತೋಚದಂತಾಗಿದೆ.
ಗೋವನಾಳ ಗ್ರಾಮದಲ್ಲಿನ 13 ಎಕರೆ 36 ಗುಂಟೆ ಜಾಗದಲ್ಲಿ ಸರ್ಕಾರಿ ಕುಡಿಯುವ ನೀರಿನ ಕೆರೆ (ಸಾರ್ವಜನಿಕ) ಎಂದು ನಮೂದಾಗಿದೆ. ಪಕ್ಕದಲ್ಲಿಯೇ ಗಾಂವಠಾಣಾ ಜಾಗ ಇರುವರಿಂದ ಕೆರೆಯ ಜಾಗ ಎಲ್ಲಿಯವರೆಗೆ ಇದೆ ಎನ್ನುವುದನ್ನು ಸಂಬಂಧಪಟ್ಟವರು ಗುರುತಿಸದ್ದರಿಂದ ಗಾಂವಠಾಣಾ ಜಾಗದಲ್ಲಿಯೇ ಇದ್ದೇವೆಂಬ ತಪ್ಪು ಕಲ್ಪನೆಯಿಂದ ಕೆರೆ ಪ್ರದೇಶದಲ್ಲಿ 35 ಕುಟುಂಬಗಳು ವಾಸವಾಗಿವೆ. ನಿವೇಶನ ಹಕ್ಕುಪತ್ರದ ಪ್ರಕಾರ ಕೇವಲ 2 ಕುಟುಂಬಗಳು ಮಾತ್ರ ಗಾಂವಠಾಣಾ ಜಾಗದಲ್ಲಿವೆ, ಉಳಿದ 12 ಕುಟುಂಬಗಳು ಸರ್ಕಾರಿ ಕುಡಿಯುವ ನೀರಿನ ಕೆರೆ (ಸಾರ್ವಜನಿಕ) ಜಾಗದಲ್ಲಿವೆ. ನಿವೇಶನದ ಹಕ್ಕುಪತ್ರ ಇಲ್ಲದೆಯೂ ಗ್ರಾಪಂನಿಂದ ನಿವೇಶನದ ಉತಾರ ಪಡೆದ ಕುಟುಂಬಗಳು ವಾಸವಾಗಿವೆ.
ಸರ್ಕಾರ ನೀಡಿದ ನಿವೇಶನ ಹಕ್ಕುಪತ್ರದ ಆಧಾರದಿಂದ ಗ್ರಾಪಂ ತೆರಿಗೆ ತುಂಬುತ್ತಾ ವಾಸವಾಗಿದ್ದೇವೆ. ಈಗ ಸ್ಥಳ ಒತ್ತುವರಿ ಎಂದು ಕೇಸು ದಾಖಲಿಸಿದ್ದಾರೆ. ಕೆರೆ ಭೂಕಬಳಿಕೆ ನಿಷೇಧ ಕಾಯ್ದೆಯಡಿ ಶಿಕ್ಷಗೆ ಒಳಗಾಗುತ್ತಿದ್ದೇವೆ. ನಾವು ಎಲ್ಲಿಗೆ ಹೋಗಬೇಕು?. ಹೇಗೆ ಬದುಕಬೇಕು?. ಬಡವರು ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಸರ್ಕಾರ ನೀಡಿದ ನಿವೇಶನ ಹಕ್ಕುಪತ್ರವಿದ್ದರೂ ಬೀದಿಗೆ ತಳ್ಳುತ್ತಿರುವುದಕ್ಕೆ ನಾವು ಮಾಡಿದ ತಪ್ಪೇನು?. ನಮಗೂ ಬದುಕಲು ಅವಕಾಶ ಕೊಡಿ ನಿವಾಸಿಗಳು ಕೇಳುತ್ತಿದ್ದಾರೆ.