ಪೊಲೀಸರಿಗೆ ಕರೊನಾ ಸೋಂಕಿನ ಭೀತಿ: ಕರ್ತವ್ಯ ವೇಳೆ ಹರಡುವ ಸಾಧ್ಯತೆ, ಮಹಿಳಾ ಸಿಬ್ಬಂದಿಗೆ ಕುಟುಂಬದ ಚಿಂತೆ

Police .
Published on

ಬೆಂಗಳೂರು: ಕರೊನಾ ಹರಡುವಿಕೆ ತಗ್ಗಿಸಲು ಸರ್ಕಾರದ ಆದೇಶಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೊಲೀಸರಿಗೂ ಕರೊನಾ ಆತಂಕ ಎದುರಾಗಿದೆ.

ಕರೊನಾ ಸೋಂಕಿತರು ಮತ್ತು ಶಂಕಿತರ ಕಾವಲು ಹಾಗೂ ಲಾಕ್​ಡೌನ್ ಆದೇಶ ಜಾರಿಗೆ ತರುವಲ್ಲಿ ನಿರತರಾಗಿರುವ ಪೊಲೀಸರು ಯಾವ ಕ್ಷಣದಲ್ಲಿ ಯಾರಿಂದ ಸೋಂಕು ಬರಲಿದೆ ಎಂಬ ಭೀತಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ರಸ್ತೆಗೆ ಇಳಿಯದಂತೆ ಜನರ ಮೇಲೆ ಲಾಠಿ ಬೀಸಿದಾಗ ತಪ್ಪಿಸಿಕೊಳ್ಳುವ ಭರದಲ್ಲಿ ಹತ್ತಿರಕ್ಕೆ ಬಂದು ಕೈ ಹಿಡಿಯುವಂಥ ಪರಿಸ್ಥಿತಿ ಎದುರಾಗುತ್ತಿದೆ. ಸೋಂಕು ಹರಡದಂತೆ ತಡೆಯಲು ಸರ್ಕಾರದಿಂದ ಸೂಕ್ತ ಉಪಕರಣ ನೀಡದಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.

ಕ್ವಾರಂಟೈನ್ ಸಂಕಷ್ಟ: ಕ್ವಾರಂಟೈನ್ ಮಾಡಲಾಗಿರುವವರ ಮನೆಗೆ ಹೋಗಿ ಅವರಿಂದ ಸಹಿ ಪಡೆಯಬೇಕಾಗಿದ್ದು, ಆತಂಕದಲ್ಲೇ ಪರಿಶೀಲಿಸುವ ಪರಿಸ್ಥಿತಿ ಎದುರಾಗಿದೆ. ಸೋಂಕಿತರ ಮನೆ ಬಳಿಯ ಪೊಲೀಸ್, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಸೋಂಕು ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಬೆಂಗಳೂರೊಂದರಲ್ಲೇ 15 ಸಾವಿರಕ್ಕೂ ಹೆಚ್ಚು ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಠಾಣೆಯ ಎಲ್ಲ ಸಿಬ್ಬಂದಿ ವಿವಿಧ ಪ್ರದೇಶಕ್ಕೆ ಹೋಗಿ ಬಂದಿರುತ್ತಾರೆ. ಅವರಲ್ಲಿ ಯಾರಾದರೂ ಮೈಮರೆತರೆ ಇಡೀ ಠಾಣೆಗೆ ಅಥವಾ ಕಚೇರಿಗೆ ಸೋಂಕು ತಗಲುತ್ತದೆ. ಸೋಂಕು 3ನೇ ಹಂತಕ್ಕೆ ತಲುಪುತ್ತಿರುವುದು ಭೀತಿಗೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ವಿಜಯವಾಣಿ ಜತೆ ಅಳಲು ತೋಡಿಕೊಂಡಿದ್ದಾರೆ.

ಮಹಿಳಾ ಪೊಲೀಸರಿಗೆ ಮಕ್ಕಳದ್ದೇ ಚಿಂತೆ: ಕರೊನಾ ಸೋಂಕನ್ನು ಎಲ್ಲಿ ತಮ್ಮ ಮಕ್ಕಳಿಗೂ ಅಂಟಿಸಿ ಬಿಡುತ್ತೇವೆಯೋ ಎಂಬ ಹೆದರಿಕೆ ಮಹಿಳಾ ಪೊಲೀಸರನ್ನು ಕಾಡುತ್ತಿದೆ. 8ರಿಂದ 10 ತಾಸು ಕರ್ತವ್ಯ ನಿರ್ವಹಿಸಿ ಮನೆಗೆ ಹೋಗಿ ಆರೈಕೆ ಮಾಡಲು ಮಕ್ಕಳನ್ನು ಮಡಿಲಿಗೆ ಹಾಕಿಕೊಂಡಾಗ ಈ ಭಯ ಹೆಚ್ಚಾಗುತ್ತದೆ. ಹೀಗಾಗಿ ಕೆಲ ಮಹಿಳಾ ಪೊಲೀಸರು ರಜೆ ಪಡೆಯಲು ಮುಂದಾಗಿದ್ದು, ಒಪ್ಪದಿದ್ದರೆ ರಾಜೀನಾಮೆ ಯೋಚನೆ ಮಾಡಿದ್ದಾರೆ.

3 ಪಾಳಿಗೆ ಪೊಲೀಸರ ಒತ್ತಾಯ: ಪೊಲೀಸರು 2 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರೊನಾ ಸೋಂಕು ಹಿನ್ನೆಲೆಯಲ್ಲಿ ವೈಟ್​ಫೀಲ್ಡ್ ವಿಭಾಗದಲ್ಲಿ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿ ದ್ದಾರೆ. ಇದರಿಂದ ಪೊಲೀಸರು ಸಮಾಜದ ಸ್ವಾಸ್ಥ್ಯ ಕಾಪಾಡುವ ಜತೆಗೆ ತಮ್ಮ ಮತ್ತು ಕುಟುಂಬದ ಕಡೆಗೂ ಹೆಚ್ಚು ಗಮನಕೊಡಲು ಸಾಧ್ಯ. ಹೀಗಾಗಿ ಎಲ್ಲರಿಗೂ 3 ಪಾಳಿ ಮಾಡಬೇಕೆಂಬುದು ಹಲವು ಪೊಲೀಸರ ಒತ್ತಾಯ.

ಕಮಿಷನರ್ ವಿರುದ್ಧ ಅಸಮಾಧಾನ

ಕರ್ತವ್ಯಕ್ಕೆ ಗೈರು ಮತ್ತು ರಜೆ ಚೀಟಿ ಕೊಡದೆ ರಜೆ ಪಡೆದರೆ ಅಂಥವರ ವೇತನ ಕಡಿತಕ್ಕೆ ಎಲ್ಲ ಡಿಸಿಪಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಹ ಮನುಷ್ಯರೇ. ಕರೊನಾ ಸೋಂಕು ಬರುವುದಿಲ್ಲ ಅಥವಾ ಅನಾರೋಗ್ಯ ಬರುವುದಿಲ್ಲ ಎನ್ನಲಾಗುವುದಿಲ್ಲ. ತುರ್ತು ಸಮಯಕ್ಕೆ ರಜೆ ತೆಗೆದುಕೊಳ್ಳಲೇಬೇಕು. ವೇತನ ಕಡಿತ ನಿರ್ಧಾರ ಸರಿಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net