ಬಳ್ಳಾರಿ ; ಈ ಬಾರಿಯ ಹವಾಮಾನ ಬದಲಾವಣೆಯಿಂದ ಜಿಲ್ಲಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದ ರೈತರಿಗೆ ಫಸಲು ಕೈಗೆ ಸೇರಲಿದೆ ಎಂಬ ಅನುಮಾನ ಕಾಡುತ್ತಿದೆ.
ಕಳೆದ ಮುಂಗಾರಿನಲ್ಲಿ ಭತ್ತ ಉತ್ತಮವಾಗಿ ಇಳುವರಿ ಬಂದಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಭತ್ತದ ಬೆಲೆ ಸಿಗದೆ ನಷ್ಟ ಅನುಭವಿಸಿ ರೈತರು ಸಾಲದ ಸುಳಿಗೆ ಸಿಲುಕಿದರು. ಕಳೆದ ವರ್ಷ ತುಂಗಭದ್ರ ಜಲಾಶಯವೂ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದ್ದರಿಂದ ಒಂದೇ ಬೆಳೆಗೆ ನೀರು ಹರಿಸಲಾಯಿತು. ಆದರೆ, ಈ ವರ್ಷದ ರಾಜ್ಯಾದ್ಯಂತ ಸಮೃದ್ಧ ಮಳೆಯಿಂದ ಜಲಾಶಯ ವೇಗವಾಗಿ ಭರ್ತಿಗೊಂಡಿತು. ಕೆಲ ದಿನಗಳಲ್ಲೇ ಜಲಾಶಯದ ಕ್ರಸ್ಟ್‌ಗೇಟ್ ಮುರಿದ ಪರಿಣಾಮ ಅರ್ಧದಷ್ಟು ನೀರು ಹೊರಗಡೆ ಹರಿಸಿ ದುರಸ್ತಿಗೊಳಿಸಿದರು. ಎರಡನೇ ಬೆಳೆಗೆ ಈ ಬಾರಿಯೂ ನೀರು ದೊರೆಯುವುದಿಲ್ಲ ಎಂಬ ಅತಂಕದಲ್ಲಿದ್ದ ರೈತರಿಗೆ ಮಲೆನಾಡು ಪ್ರದೇಶದಲ್ಲಿ ಭರಪೂರ ಮಳೆ ಸುರಿದ ಪರಿಣಾಮ ಎರಡನೇ ಬಾರಿ ಜಲಾಶಯ ಭರ್ತಿಯಾಗಿ ಸಂತಸ ತಂದಿತು. ಆದರೆ, ಈಗ ಎರಡನೇ ಬೆಳೆ ನಂಬಿ ಭತ್ತ ನಾಟಿ ಮಾಡಿದ್ದ ರೈತರಿಗೆ ಕಟಾವು ಹಂತದವರೆಗೆ ಜಲಾಶಯದಿಂದ ನೀರು ಸಿಗುವುದೆ ಎಂಬ ಚಿಂತೆ ಕಾಡ ತೊಡಗಿದೆ.
ಹಿಂಗಾರಿನಲ್ಲಿ ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ 64,228 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ ಭತ್ತ 53,642 ಹೆಕ್ಟೇರ್, ರಾಗಿ ಹಾಗೂ ಇತರೆ ಸೇರಿದಂತೆ 4,324 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ತುಂಗಭದ್ರ ಜಲಾಶಯದ ಎಲ್‌ಎಲ್‌ಸಿ ಕಾಲುವೆ ಹರಿದು ಹೋಗಿರುವುದರಿಂದ ಶೇ.87% ರಷ್ಟು ಆರ್‌ಎನ್‌ಆರ್ ಹಾಗೂ ಸೋನಾ ಮಸೋರಿ ಭತ್ತದ ತಳಿಗಳನ್ನು ನಾಟಿ ಮಾಡಲಾಗಿದೆ. ಆದರೆ, ಹವಾಮಾನ ಬದಲಾವಣೆಯಿಂದ ಈ ಬಾರಿ ಚಳಿ ಹೆಚ್ಚಿದ್ದು ಭತ್ತದಲ್ಲಿ ಕುಸುಮ, ವಡೆ ಬಿಚ್ಚುವುದು ಹಾಗೂ ತೆನೆ ಹೊರಬರಲು ತಡವಾಗಿದೆ. ಆದರೆ, ಜಲಾಶಯದ ನೀರಿನ ಪ್ರಮಾನ ದಿನೇದಿನೆ ಕಡಿಮೆಯಾಗುತ್ತಿರುವುದರಿಂದ ಈ ತಿಂಗಳ ಕೊನೆಯಲ್ಲಿ ಎಲ್‌ಎಲ್‌ಸಿ ಕಾಲುವೆ ನೀರು ಸ್ಥಗಿತಗೊಳಿಸಲು ನಿರ್ಧಾರಿಸಲಾಗಿದೆ ಎನ್ನಲಾಗಿದೆ. ಆದರೆ, ಏ.10 ರವರೆಗೆ ನೀರು ಹರಿಸದಿದ್ದರೆ ಎಕರೆಗೆ ಲಕ್ಷಾಂತರ ವ್ಯಯಿಸಿರುವ ರೈತರು ಮತ್ತೋಮ್ಮೆ ನಷ್ಟ ಹೊಂದಲಿದ್ದಾರೆ. ಆದ್ದರಿಂದ, ಮಾ.21 ರಂದು ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲೆಯ ಭತ್ತ ಬೆಳೆದಿರುವ ರೈತರ ಅನುಕೂಲಕ್ಕಾಗಿ ನೀರು ಹರಿಸಲಿ ಎಂಬ ಆಗ್ರಹವಾಗಿದೆ.
ತಲುಪದ ನೀರು : ಜಿಲ್ಲೆಯ ಗ್ರಾಮೀಣ ಹಾಗೂ ಸಿರಗುಪ್ಪ ಭಾಗದಲ್ಲಿ ಎಲ್‌ಎಲ್‌ಸಿ ಮೂಲಕ ಉಪ ಕಾಲುವೆಗಳಿಗೆ ನೀರು ಹರಿಯಲಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷೃದಿಂದ ಜಲಾಶಯದ ಆಯಾಕಟ್ಟಿನ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಅಲ್ಲದೆ, ಅಕ್ರಮವಾಗಿ ಪೈಪ್‌ಗಳು ಅಳವಡಿಸಿಕೊಂಡು ಹೊಲಗಳಿಗೆ ನೀರು ಹರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ಕೊನೆಯ ಭಾಗದ ಭತ್ತದ ಜಮೀನುಗಳು ನೀರಿಲ್ಲದೆ ಒಣಗುತ್ತಿವೆ. ಹಲವು ರೈತರು ನೀರಿಗಾಗಿ ರಾತ್ರಿಯೆಲ್ಲಾ ಕಾಲುವೆಗಳ ಮೇಲೆ ಅಲೆದಾಟ ನಡೆಸುತ್ತಿದ್ದಾರೆ. ಕಾಲುವೆ ಮೇಲೆ ಗಸ್ತು ತಿರುಗಿ ನೀರು ತಲುಪಿಸಬೇಕಾದ ಅಧಿಕಾರಿಗಳು ಜವಾಬ್ದಾರಿ ಮರೆತಿದ್ದಾರೆ.
ಕೋಟ್.. ಹವಾಮಾನ ಬದಲಾವಣೆಯಿಂದ ಭತ್ತ ಕಟಾವು ತಡವಾಗಲಿದೆ. ಎಲ್‌ಎಲ್‌ಸಿ ಕಾಲುವೆಗೆ ಏ.10ರವರೆಗೆ ನೀರು ಹರಿಸದೆ ಇದ್ದರೆ ಜಿಲ್ಲೆಯ ಎರಡು ಲಕ್ಷ ಎಕರೆಯಲ್ಲಿ ಭತ್ತ ಬೆಳೆದಿರುವ ನಷ್ಟ ಹೊಂದಲಿದ್ದಾರೆ. ನೀರು ಬಿಡಲು ಸರ್ಕಾರ ಒಪ್ಪದಿದ್ದರೆ ಎಕರೆಗೆ 50 ಸಾವಿರ ರೂ. ಪರಿಹಾರ ಒದಗಿಸಲಿ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
- ಜಿ.ಪುರುಷೊತ್ತಮಗೌಡ, ಅಧ್ಯಕ್ಷ, ತುಂಗಭದ್ರ ರೈತ ಸಂಘ,ಬಳ್ಳಾರಿ.
ಕೋಟ್.. ಜಿಲ್ಲಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದಾರೆ. ಈ ಬಾರಿ ಹವಾಮಾನ ಬದಲಾವಣೆಯಿಂದ ಈ ಬಾರಿ ಭತ್ತ ಏಪ್ರೀಲ್ ಕೊನೆಯ ವಾರದಲ್ಲಿ ಕಟಾವಿಗೆ ಬರಲಿದೆ. ಭತ್ತ ಕಟಾವಿಗೆ ಬರುವವರೆಗೆ ಸರ್ಕಾರ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸುವ ವಿಶ್ವಾಸವಿದೆ.
- ಸೋಮಸುಂದರ್, ಉಪ ನಿರ್ದೇಶಕ, ಕೃಷಿ ಇಲಾಖೆ, ಬಳ್ಳಾರಿ.