ಪೊಲೀಸ್ ಪ್ರವಾಸ ಭತ್ಯೆ ವಂಚನೆ ಪ್ರಕರಣ: ಎಫ್‌ಡಿಎ ಯಶಸ್ವಿನಿ ಸಂಬಂಧಿ ಬಂಧನ

tumkur-sp-office1594565809
Published on

ತುಮಕೂರು: ಪೊಲೀಸ್ ಸಿಬ್ಬಂದಿ ಪ್ರವಾಸ ಭತ್ಯೆ ವಂಚಿಸಿರುವ ಪ್ರಮುಖ ಆರೋಪಿ ಎಸ್ಪಿ ಕಚೇರಿಯ ಎಫ್‌ಡಿಎ ಯಶಸ್ವಿನಿ ಅವರ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ ನಡೆದಿದ್ದ ಬಹುದೊಡ್ಡ ವಂಚನೆ ಪ್ರಕರಣದ ಪ್ರಮುಖ ಆರೋಪಿ ಎಫ್‌ಡಿಎ ಯಶಸ್ವಿನಿ ತಲೆಮರೆಸಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶಸ್ವಿನಿ ಅಕ್ಕನ ಗಂಡ ಕಿಶೋರ್‌ಕುಮಾರ್ ಅವರನ್ನು ವೈ.ಎನ್.ಹೊಸಕೋಟೆಯಲ್ಲಿ ಹೊಸಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಿಶೋರ್ ಖಾತೆಗೂ ಟಿಎ ಬಿಲ್: ಪೊಲೀಸ್ ಸಿಬ್ಬಂದಿ ಪ್ರವಾಸ ಭತ್ಯೆ ಹಣವನ್ನು ತನ್ನ ಬಾವ ಕಿಶೋರ್ ಕುಮಾರ್ ಖಾತೆಗೂ ಎಫ್‌ಡಿಎ ಯಶಸ್ವಿನಿ ಹಾಕಿದ್ದು ಈತನನ್ನು ಈ ಪ್ರಕರಣದ ಎರಡನೇ ಆರೋಪಿಯನ್ನಾಗಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಯಶಸ್ವಿನಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಡಿಸೆಂಬರ್ 30 ರಂದು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಜಾಗೊಳಿಸಿತ್ತು. ಆನಂತರ ಜಿಲ್ಲಾ ಪೊಲೀಸ್ ಇಲಾಖೆಯು ಆರೋಪಿ ಪತ್ತೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.

ಪ್ರಕರಣ ಹಿನ್ನೆಲೆ: 2020ರ ಜನವರಿ ತಿಂಗಳಿನಲ್ಲಿ 18 ಪೊಲೀಸರ ಪ್ರವಾಸ ಭತ್ಯೆಯ ಹೆಚ್ಚುವರಿ ಬಿಲ್ ತಯಾರಿಸಿ 20,50,970 ರೂ.,ಗಳನ್ನು ಜಿಲ್ಲಾ ಖಜಾನೆಗೆ ಸಲ್ಲಿಸಿ ಈ ಹೆಚ್ಚುವರಿ ಮೊತ್ತವನ್ನು ಪೊಲೀಸರಿಂದ ತನ್ನ ಸ್ವಂತ ಖಾತೆಗೆ ಗೂಗಲ್ ಪೇ ಮಾಡಿಸಿಕೊಂಡು ಎಫ್‌ಡಿಎ ಯಶಸ್ವಿನಿ ಸರ್ಕಾರಕ್ಕೆ ವಂಚಿಸಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಫ್‌ಡಿಎ ಅನ್ನು ಅಮಾನತಿನಲ್ಲಿಟ್ಟು ಇಲಾಖೆ ತನಿಖೆಗೆ ಸಹ ಆದೇಶಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net