

ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಆರೋಪಿ ಚಂದ್ರು ಕುರಿತು ಶನಿವಾರ ಸಂಜೆ ಸಿಸಿಬಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಪ್ರವೃತ್ತರಾದ ಪೊಲೀಸರು ಜ್ಞಾನಭಾರತಿ ಸಮೀಪದ ಉಲ್ಲಾಳದ ಬಳಿಯಿದ್ದ ಅಪಾರ್ಟ್ವೆುಂಟ್ ಬಳಿ ತೆರಳಿ ಆರೋಪಿ ಚಂದ್ರುಗಾಗಿ ಕಾದಿದ್ದರು. ಇದೇ ವೇಳೆ ಹೊರಹೋಗಿದ್ದ ಚಂದ್ರು ಪೊಲೀಸರಿಗೆ ಅನುಮಾನವಿದ್ದ ಪ್ಲಾ್ಯಟ್ನ ಒಳಗೆ ಹೋಗುತ್ತಿರುವುದನ್ನು ಗಮನಿಸಿದ್ದರು. ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಚಂದ್ರು ಪ್ಲಾ್ಯಟ್ಗೆ ತೆರಳಿ ಕಾರಿಗೆ ಬೈಕ್ನಲ್ಲಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದಾನೆ.
ಆತನನ್ನು ಹೊರಗೆ ಕರೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತಾಯಿ, ಮಗ ಮನೆಯಲ್ಲಿಲ್ಲ ಎಂದಿದ್ದರು. ನಿಮ್ಮ ಮಗ ಮನೆಗೆ ಬಂದಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿ ಮನೆಯ ರೂಂನೊಳಗೆ ಹೋಗಿ ನೋಡಿದಾಗ ಪ್ರಶ್ನೆಪತ್ರಿಕೆ ಸಮೇತ ಚಂದ್ರು ಸಿಕ್ಕಿಬಿದ್ದಿದ್ದ. ಚಂದ್ರು ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದನ್ನು ಅರಿತಿದ್ದ ಸಿಸಿಬಿ ತಂಡ ಆಕ್ಸಿಡೆಂಟ್ ಕತೆ ಕಟ್ಟಿ ಹೊರಕರೆತಂದು ಬಂಧಿಸಿದ್ದರು. ಚಂದ್ರುಗೆ ವಿವಾಹ ನಿಶ್ಚಯವಾಗಿದ್ದು, ಇತ್ತೀಚೆಗೆ ಉಳ್ಳಾಲದ ಬಳಿ ಪ್ಲಾಟ್ ಖರೀದಿಸಿದ್ದು, ಇನ್ನೂ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರಲಿಲ್ಲ.
ರಾಚಪ್ಪನ ಪಾತ್ರವೇನು?: ಪ್ರಕರಣ 2ನೇ ಆರೋಪಿ ರಾಚಪ್ಪ ಎಸ್ಡಿಎಗೆ ಆಯ್ಕೆ ಆಗಿದ್ದ. ಎಫ್ಡಿಎಗೆ ನೇಮಕಗೊಂಡರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ಲೆಕ್ಕಚಾರ ಹಾಕಿಕೊಂಡಿದ್ದ. ಇದಕ್ಕಾಗಿ ಚಂದ್ರು ಸಹಚರನಾಗಿ ಪ್ರಶ್ನೆಪತ್ರಿಕೆ ಅವ್ಯವಹಾರದಲ್ಲಿ ಭಾಗಿಯಾಗಿದ್ದ.
ಕೆಪಿಎಸ್ಸಿ ಗೌಪ್ಯತೆ ವಿಭಾಗದ ನೌಕರ ರಮೇಶ್ ಎರಕಲ್ನನ್ನು ಬಾಗಲಕೋಟೆ ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮಕ್ಕೆ ಪೊಲೀಸರು ಭೇಟಿ ಕೊಟ್ಟು ಸಹೋದರನ ಮೂಲಕ ಮಾಹಿತಿ ಪಡೆದು ಜಮಖಂಡಿ ತಾಲೂಕಿನ ಪಡಸಲಗಿಯಲ್ಲಿ ಬಂಧಿಸಿದ್ದರು. ರಮೇಶ್, ಎಫ್ಡಿಎ ಪರೀಕ್ಷೆ ಕಟ್ಟಿದ್ದ. ಭಾನುವಾರ ಪರೀಕ್ಷೆ ಬರೆಯಬೇಕಿತ್ತು. ರಮೇಶ್ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಅಭ್ಯರ್ಥಿಗಳ ಸಂರ್ಪಸುತ್ತಿದ್ದ.
ಪ್ರಶ್ನೆಪತ್ರಿಕೆಗೆ ಬಂದು ಸಿಕ್ಕಿಬಿದ್ರು
ಚಂದ್ರು ಬಂಧನದ ಬಳಿಕ ಕೆಪಿಎಸ್ಸಿ ಅಧಿಕಾರಿಗಳನ್ನು ಸಂರ್ಪಸಿದ ಪೊಲೀಸರು, ಪ್ರಶ್ನೆ ಪತ್ರಿಕೆ ಪ್ರತಿ, ಉತ್ತರ ಪ್ರತಿಗಳ ಫೋಟೋ ತೆಗೆದು ಕಳಿಸಿದ್ದರು. ಎಫ್ಡಿಎ ಪ್ರಶ್ನೆ ಪತ್ರಿಕೆ ಎಂಬುದನ್ನು ಅವರು ಖಚಿತಪಡಿಸಿದ್ದರು. ಚಂದ್ರು ಮೊಬೈಲ್ ವಶಪಡಿಸಿಕೊಂಡ ಪೊಲೀಸರು, ವಿಚಾರಣೆ ನಡೆಸಿದಾಗ ಈತನ ಸಹಚರ ರಾಚಪ್ಪನ ಬಗ್ಗೆ ಮಾಹಿತಿ ಕೊಟ್ಟಿದ್ದ. ಈ ಮಾಹಿತಿ ಮೇರೆಗೆ ವಿಜಯನಗರದಲ್ಲಿದ್ದ ರಾಚಪ್ಪನ ಮನೆಗೆ ತರಳಿ ಬಂಧಿಸಿದ್ದರು. ಆರೋಪಿಯಿಂದ ಪ್ರಶ್ನೆ ಪತ್ರಿಕೆ ಪಡೆದ ಅಭ್ಯರ್ಥಿಗಳಿಗೆ ಚಂದ್ರು ಬಳಿಯಿದ್ದ ಮೊಬೈಲ್ ಮೂಲಕವೇ ಎಸಿಪಿ ವೇಣುಗೋಪಾಲ್ ಕರೆ ಮಾಡಿಸಿದ್ದರು. ಪ್ರಶ್ನೆ ಪತ್ರಿಕೆ ಸಂಬಂಧ ತುರ್ತು ಮಾತಾನಾಡುವುದಿದೆ. ನಾನು ಹೇಳುವ ವಿಳಾಸಕ್ಕೆ ಬನ್ನಿ ಎಂದು ಹೇಳಿಸಿದ್ದರು. ಚಂದ್ರು ಸೂಚನೆಯಂತೆ 12 ಅಭ್ಯರ್ಥಿಗಳೂ ಕೆಲ ಹೊತಿನಲ್ಲೇ ಆತ ಹೇಳಿದ ಜಾಗಕ್ಕೆ ಬಂದಿದ್ದರು.
ಇನ್ನಷ್ಟು ಅಭ್ಯರ್ಥಿಗಳಿಗೆ ತಲಾಶ್!
ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಶಾಮೀಲಾದ ಇನ್ನಷ್ಟು ಅಭ್ಯರ್ಥಿಗಳ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಅವರನ್ನು ಬಂಧಿಸುವ ಸಾಧ್ಯತೆಗಳಿವೆ. ಬಂಧಿತರ ಜತೆ ಸಂಪರ್ಕದಲ್ಲಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ಮುಂದುವರಿದಿದೆ. ಎಲ್ಲ ಆರೋಪಿಗಳ ಮೊಬೈಲ್ಗಳನ್ನು ಟೆಕ್ನಿಕಲ್ ಸೆಲ್ಗೆ ಕಳುಹಿಸಿ ಫೋನ್ ಕರೆ, ಮೆಸೇಜ್ಗಳ ಮೂಲಕ ಉಳಿದ ಆರೋಪಿಗಳ ಜಾಡು ಹಿಡಿಯಲು ಸಿಸಿಬಿ ಮುಂದಾಗಿದೆ.
ಆನ್ಲೈನ್ ವ್ಯವಹಾರ ಇಲ್ಲ: ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಮೊದಲ ಹಂತದ ವ್ಯಕ್ತಿಯಿಂದ 2ನೇ ಹಂತದಲ್ಲಿ ಚಂದ್ರು ಡೀಲರ್ ಆಗಿದ್ದ. ತನಗೆ ಪರಿಚಯವಿದ್ದು, ತನ್ನ ಬಳಿ ಬರುವವರಿಗೆ ಮಾತ್ರ ಕೈಯಲ್ಲೇ ಪ್ರಶ್ನೆಪತ್ರಿಕೆ ನೀಡುತ್ತಿದ್ದ. ತನ್ನ ಸುಳಿವು ಸಿಗಬಾರದೆಂದು ವಾಟ್ಸ್ಆಪ್, ಆನ್ಲೈನ್ನಲ್ಲಿ ವ್ಯವಹಾರ ನಡೆಸುತ್ತಿರಲಿಲ್ಲ. ಅಪರಿಚಿತರಿಗೆ ಉತ್ತರ ಪತ್ರಿಕೆ ನೀಡುತ್ತಿರಲಿಲ್ಲ.