ಖಾಕಿಗೇ ವಂಚಿಸಿದ್ದ ಗ್ಯಾಂಗ್ ಅಂದರ್ : 5 ರಾಜ್ಯಗಳ 350 ಪೊಲೀಸರ ಫೇಸ್​ಬುಕ್ ಖಾತೆ ಹ್ಯಾಕ್

FB hacking Gang
Published on

| ಕೀರ್ತಿನಾರಾಯಣ ಸಿ. ಬೆಂಗಳೂರು : ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಪೊಲೀಸರ ‘ಫೇಸ್​ಬುಕ್’ ಖಾತೆ ಹ್ಯಾಕರ್ಸ್ ಗ್ಯಾಂಗ್ ಕೊನೆಗೂ ತೆಲಂಗಾಣ ಪೊಲೀಸರ ಬಲೆಗೆ ಬಿದ್ದಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದ 350 ಪೊಲೀಸರ ಖಾತೆ ಹ್ಯಾಕ್ ಮಾಡಿ ಲಕ್ಷಾಂತರ ರೂ. ಹಣ ಲೂಟಿ ಮಾಡಿರುವ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ರಾಜಸ್ಥಾನದ ಭರತ್​ಪುರ್ ಜಿಲ್ಲೆಯ ಮುಸ್ತಖಿಂ ಖಾನ್, ಮನಿಷ್, ಶಾಹಿದ್ ಮತ್ತು ಸದ್ದಾಂ ಖಾನ್ ಬಂಧಿತರು. ಓಎಲ್​ಎಕ್ಸ್​ನಲ್ಲಿ ಯೋಧರ ಹೆಸರಿನಲ್ಲಿ ವಾಹನಗಳನ್ನು ಮಾರಾಟಕ್ಕಿಟ್ಟಂತೆ ನಟಿಸಿ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ಗ್ಯಾಂಗ್ ಕೂಡ ಇದೇ ಎಂಬುದು ದೃಢಪಟ್ಟಿದೆ.

ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ಮೊಬೈಲ್ ನಂಬರ್ ಲೊಕೇಷನ್ ಆಧರಿಸಿ ನಲ್ಲಗೊಂಡ ಟೌನ್ ಠಾಣೆ ಇನ್​ಸ್ಪೆಕ್ಟರ್ ಎಸ್.ಎಂ. ಬಾಷ ನೇತೃತ್ವದ ತಂಡ ರಾಜಸ್ಥಾನದ ಭರತ್​ಪುರಕ್ಕೆ ತೆರಳಿತ್ತು. ಸ್ಥಳೀಯ ಪೊಲೀಸರಿಗೆ ತಿಳಿಸಿದರೆ ವಿಷಯ ಸೋರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಯನ್ನೇ ಕಳುಹಿಸಿ ಆರೋಪಿಗಳು ವಾಸವಿದ್ದ 4 ಮನೆಗಳನ್ನು ಗುರುತಿಸಿ, ನಂತರ ಅಲ್ಲಿನ ಪೊಲೀಸರಿಗೆ ತಿಳಿಸಲಾಯಿತು. ಬೆಳಗಿನ ಜಾವ 3.30ಕ್ಕೆ ದಾಳಿ ನಡೆಸಿ 7 ಜನರನ್ನು ವಶಕ್ಕೆ ಪಡೆದೆವು. ಆದರೆ, ಜೀಪ್ ಸೈರನ್ ಹಾಕಿದ್ದರಿಂದ ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದ. ಮತ್ತೆ 4 ದಿನ ಕಾರ್ಯಾಚರಣೆ ನಡೆಸಿ ಆತನನ್ನೂ ಬಂಧಿಸಲಾಯಿತು ಎಂದು ಇನ್​ಸ್ಪೆಕ್ಟರ್ ಎಸ್.ಎಂ. ಬಾಷ ವಿಜಯವಾಣಿಗೆ ತಿಳಿಸಿದರು.

ಆಧಾರ್ ಕಾರ್ಡ್ ಕೊಟ್ಟರೆ 3000 ರೂ.! ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ತೆರೆದು ಗೂಗಲ್ ಪೇ ಅಥವಾ ಫೋನ್ ಪೇ ಮುಖಾಂತರ ಹಣ ಹಾಕಿಸಿಕೊಳ್ಳುತ್ತಿದ್ದರು. ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ 3000 ಸಾವಿರ ರೂ. ಕೊಟ್ಟು ಆಧಾರ್ ಕಾರ್ಡ್ ಪಡೆಯುತ್ತಿದ್ದರು. ಅವರ ಹೆಸರಲ್ಲೇ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ತೆರೆಯುತ್ತಿದ್ದರು. ಆರೋಪಿಗಳ ಬಳಿ 30 ಸಿಮ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

8ನೇ ತರಗತಿ ಫೇಲ್!

ಎಲ್ಲ ಆರೋಪಿಗಳೂ 8ನೇ ತರಗತಿ ಅರ್ಧಕ್ಕೇ ಬಿಟ್ಟಿದ್ದರು. ಮೊದಲು ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ದರೋಡೆ ಮಾಡುತ್ತಿದ್ದವರು, ನಂತರ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಲು ಆರಂಭಿಸಿದರು. ಪೊಲೀಸರ ಫೇಸ್​ಬುಕ್ ಖಾತೆ ಹ್ಯಾಕ್ ಮಾಡುವ ಮೂಲಕ ಪ್ರತಿನಿತ್ಯ 40ರಿಂದ 50 ಸಾವಿರ ರೂ.ವರೆಗೆ ಲಪಟಾಯಿಸುತ್ತಿದ್ದರು.

ಕರ್ನಾಟಕ ಅಧಿಕಾರಿಗಳೇ ಹೆಚ್ಚು

ಸುಮಾರು 350 ಪೊಲೀಸ್ ಅಧಿಕಾರಿಗಳ ಫೇಸ್​ಬುಕ್ ಖಾತೆ ಹ್ಯಾಕ್ ಮಾಡಿ ಹಣ ವಸೂಲಿ ಮಾಡಲಾಗಿದೆ. ಇದರಲ್ಲಿ 81 ಅಧಿಕಾರಿಗಳು ತೆಲಂಗಾಣಕ್ಕೆ ಸೇರಿದವರು. ಉಳಿದ 269 ಅಧಿಕಾರಿಗಳು ಕರ್ನಾಟಕ, ತಮಿಳುನಾಡು ಹಾಗೂ ಹಿಮಾಚಲ ಪ್ರದೇಶಕ್ಕೆ ಸೇರಿದ್ದಾರೆ. ಕರ್ನಾಟಕ ಪೊಲೀಸರ ಖಾತೆಗಳನ್ನೇ ಹೆಚ್ಚು ಹ್ಯಾಕ್ ಮಾಡಲಾಗಿದೆ.

ಲಾಕ್​ಡೌನ್ ವೇಳೆ ಹ್ಯಾಕಿಂಗ್ ಶುರು

ಆರೋಪಿಗಳು ಮೊದಲು ಓಎಲ್​ಎಕ್ಸ್​ನಲ್ಲಿ ವಂಚನೆ ಮಾಡುತ್ತಿದ್ದರು. ಆದರೆ, ಕರೊನಾ ಲಾಕ್​ಡೌನ್ ಸಮಯದಲ್ಲಿ ಓಎಲ್​ಎಕ್ಸ್​ನಲ್ಲಿ ವಾಹನಗಳ ಖರೀದಿ ನಿಂತಿದ್ದರಿಂದ ಹಣ ಲೂಟಿ ಮಾಡಲು ಆಗಿರಲಿಲ್ಲ. ಹೀಗಾಗಿ ಪೊಲೀಸರ ಫೇಸ್​ಬುಕ್ ಹ್ಯಾಕ್ ಮಾಡಿ, ಅವರ ಸ್ನೇಹಿತರಿಂದ ಹಣ ವಸೂಲಿ ಮಾಡುವ ಹೊಸ ದಂಧೆ ಶುರು ಮಾಡಿದ್ದರು.

ವಂಚನೆ ಹೇಗೆ? ಪೊಲೀಸ್ ಸಬ್​ಇನ್​ಸ್ಪೆಕ್ಟರ್ ಹಾಗೂ ಅವರಿಗಿಂತ ಮೇಲ್ಪಟ್ಟ (ಐಪಿಎಸ್​ವರೆಗೆ) ಅಧಿಕಾರಿಗಳ ಫೇಸ್​ಬುಕ್ ಖಾತೆ ಗುರುತಿಸಿ, ಅವುಗಳನ್ನು ಹ್ಯಾಕ್ ಮಾಡಲಾಗುತ್ತಿತ್ತು ಅಥವಾ ಅವರ ಪ್ರೊಫೈಲ್​ನಲ್ಲಿರುವ ಫೋಟೋ ಕದ್ದು ನಕಲು ಖಾತೆ ಸೃಷ್ಟಿಸುವುದು. ಅಧಿಕಾರಿಯ ಸ್ನೇಹಿತರಿಗೆ ಮೆಸೆಂಜರ್ ಮೂಲಕ ಸಂದೇಶ ಕಳಿಸಿ, ಅನಾರೋಗ್ಯ, ಶುಭ ಸಮಾರಂಭ ಅಥವಾ ಇನ್ಯಾವುದೋ ಕಾರಣ ಕೊಟ್ಟು ತುರ್ತು ಹಣ ಬೇಕಾಗಿದೆ ಎಂದು ನಂಬಿಸಿ ಗೂಗಲ್ ಪೇ, ಫೋನ್ ಪೇ ಮೂಲಕ ಖಾತೆಗೆ ವರ್ಗಾಯಿಸಿಕೊಂಡು ವಂಚಿಸುತ್ತಿದ್ದರು.

ಇಡೀ ಊರಿನ ಜನರು ಒಂದಾಗಿ ಬಂಧಿಸಲು ಹೋಗುವ ಪೊಲೀಸರನ್ನೇ ಹೊಡೆದು ಕೊಲ್ಲುತ್ತಾರೆ. ಮಾಹಿತಿ ಲೀಕ್ ಆಗಬಾರದೆಂಬ ಕಾರಣಕ್ಕೆ ಸ್ಥಳೀಯ ಪೊಲೀಸರಿಗೂ ತಿಳಿಸಲಿಲ್ಲ. ಎಲ್ಲರೂ ನಿದ್ರೆಯಲ್ಲಿರುವಾಗ ದಾಳಿ ನಡೆಸಿ ಬಂಧಿಸಿದೆವು. ರಾಜಸ್ಥಾನದ ಭರತ್​ಪುರ್, ಅಲ್ವಾರ್ ಮತ್ತು ಹರಿಯಾಣದ ಮೆವಾರ್ ಊರುಗಳಲ್ಲೇ ಅತಿ ಹೆಚ್ಚು ಸೈಬರ್ ಕ್ರೖೆಂ ಆರೋಪಿಗಳಿರುವುದು. |ಎಸ್.ಎಂ.ಬಾಷ ಇನ್​ಸ್ಪೆಕ್ಟರ್, ನಲ್ಲಗೊಂಡ ಟೌನ್ ಠಾಣೆhttps://www.vijayavani.net/central-government-released-ayurveda-protocol-for-corona-positive/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net