

ಮಂಗಳೂರು: ಸುರತ್ಕಲ್ ಬಳಿ ನಿವಾಸಿ ಫಾಜಿಲ್ ಹತ್ಯೆ ಘಟನೆಯಲ್ಲಿ ಬಂಧಿತ ಆರು ಮಂದಿ ಆರೋಪಿಗಳಿಗೆ ಮಂಗಳೂರು ನ್ಯಾಯಾಲಯ ಆ.15ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.
ಜು.27ರಂದು ರಾತ್ರಿ ಫಾಜಿಲ್‌ನನ್ನು ಕಾರಿನಲ್ಲಿ ಬಂದ ಹಂತಕರ ತಂಡ ಅಟ್ಟಾಡಿಸಿ ಹೊಡೆದು ಕೊಲೆ ಮಾಡಿ ಪರಾರಿಯಾಗಿತ್ತು. ಈ ಘಟನೆಗೆ ಸಂಬಂಧಿಸಿ ಆರೋಪಿಗಳಾದ ಸುರತ್ಕಲ್ ಸುತ್ತಮುತ್ತಲಿನ ಸುಹಾಸ್ ಶೆಟ್ಟಿ, ಮೋಹನ್ ಆಲಿಯಾಸ್ ಮೋಹನ್ ಸಿಂಗ್, ಗಿರಿಧರ್, ಅಭಿಷೇಕ್, ಶ್ರೀನಿವಾಸ್ ಹಾಗೂ ದೀಕ್ಷಿತ್ ಇವರನ್ನು ಮಂಗಳವಾರ ಮಂಗಳೂರು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಗಳಿಗೆ ಕಾರು ಬಾಡಿಗೆಗೆ ನೀಡಿದ ಸ್ಥಳೀಯ ಅಜಿತ್ ಕ್ರಾಸ್ತಾ ಎಂಬಾತನ್ನು ಈಗಾಗಲೇ ಬಂಧಿಸಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಉಳಿದ ಆರು ಆರೋಪಿಗಳಿಗೆ 14 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿತ್ತು.