ಕಾಣೆಯಾದ ಮಗಳನ್ನು ಹುಡುಕಿ ಕೊಡಲು ತಂದೆಯ ಅಳಲು

10 Dwd 1A
Published on

ಧಾರವಾಡ ಕಾಣೆಯಾಗಿರುವ ಮಗಳನ್ನು ಹುಡುಕಿ ಕೊಡುವಂತೆ ಆಗ್ರಹಿಸಿ ತಂದೆಯೊಬ್ಬ ನಗರದ ಮಹಿಳಾ ಠಾಣೆ ಎದುರು ಗೋಳಾಡಿದ ಘಟನೆ ನಡೆದಿದೆ.

ಮಗಳನ್ನು ಹುಡುಕುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮರೇವಾಡ ಗ್ರಾಮದ ಮುದ್ದಪ್ಪ ಜಂಗಳಿ ಎಂಬಾತ ಒಂದು ಹಂತದಲ್ಲಿ ಠಾಣೆಯ ಆವರಣದ ಮರವೇರಿ ಆತ್ಮಹತ್ಯೆಗೆ ಯತ್ನಿಸಿದ್ದ.

ಮಗಳು ಬಸಮ್ಮ ಜಂಗಳಿ (20) ಜು. 23ರಂದು ಕಾಣೆಯಾಗಿದ್ದಳು. ಈ ಕುರಿತು ಮುದ್ದಪ್ಪ ಅಂದೇ ಮಹಿಳಾ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ. ನಂತರದ ದಿನಗಳಲ್ಲಿ ಮಗಳ ಇರುವಿಕೆಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸಿದ್ದ.

ತನ್ನ ಮಗಳನ್ನು ಬೈಲಹೊಂಗಲ ತಾಲೂಕಿನ ಮಡ್ಡಿಗಿರಿಯಾಲದ ಗಂಗಪ್ಪ ಚುರುಮುರಿ ಎಂಬಾತ ಅಪಹರಿಸಿದ್ದಾನೆ. ಆತ ತನ್ನ ಸಂಬಂಧಿಯಾಗಿದ್ದು, ಇಬ್ಬರೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದರೆ ದಾಖಲೆ ಕೊಡಬೇಕು. ಇಲ್ಲದಿದ್ದರೆ ಮಗಳನ್ನು ಕರೆತಂದು ತಮಗೆ ಒಪ್ಪಿಸಿ ಎಂದು ಮುದ್ದಪ್ಪ ಗೋಳಾಡಿದ. ಒಂದು ಹಂತದಲ್ಲಿ ಮಹಿಳಾ ಪೊಲೀಸ್ ಪೇದೆಗಳೊಂದಿಗೆ ಮಾತಿನ ಚಕಮಕಿ ನಡೆದು ಠಾಣೆಯ ಆವರಣದಲ್ಲಿರುವ ಮರವೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಓಡಾಡಿದ. ಸ್ಥಳದಲ್ಲಿದ್ದ ಪೊಲೀಸರು ಮುದ್ದಪ್ಪ್ಪನ್ನು ತಡೆದು ಸಮಾಧಾನಪಡಿಸಿದರು. ಅದಕ್ಕೆ ಸಮಾಧಾನಗೊಳ್ಳದ ಮುದ್ದಪ್ಪ ಬುಧವಾರ ರಾತ್ರಿ ಠಾಣೆಯ ಆವರಣದಲ್ಲೇ ಕಾಲ ಕಳೆದಿದ್ದಾನೆ. ಗುರುವಾರ ಸಂಬಂಧಿಕರೊಂದಿಗೆ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿ, ಕೂಡಲೇ ಮಗಳನ್ನು ಕರೆತರುವಂತೆ ಅಳಲು ತೋಡಿಕೊಂಡ.

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಅವರಿಗೂ ಮಾಹಿತಿ ಹೋಗಿದ್ದು, ಠಾಣೆಯ ಇಬ್ಬರನ್ನು ಮಡ್ಡಿಗಿರಿಯಾಲ ಗ್ರಾಮಕ್ಕೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net