ತಂದೆಯನ್ನೇ ಕಡಿದು ಕೊಂದ ಮಗ

Crime
Published on

ಕುಂದಾಪುರ ಮನೆ ಅಂಗಳದಲ್ಲಿ ಕಸಕ್ಕೆ ಬೆಂಕಿ ಹಾಕುವ ವಿಚಾರದಲ್ಲಿ ತಂದೆಯ ಜತೆಗೆ ಜಗಳಕ್ಕಿಳಿದ ಪುತ್ರ ಬಳಿಕ ತಂದೆಯನ್ನು ಕಡಿದು ಕೊಲೆಗೈದ ಘಟನೆ ಕುಂದಾಪುರ ತಾಲೂಕಿನ ಗೋಪಾಡಿಯಲ್ಲಿ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ನರಸಿಂಹ (74) ಮೃತಪಟ್ಟವರು. ಕೊಲೆ ಬಳಿಕ ಮನೆ ಸಮೀಪವೇ ಇದ್ದ ಆರೋಪಿ ರಾಘವೇಂದ್ರ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಗ್ಯಾರೇಜ್ ಇಟ್ಟುಕೊಂಡಿದ್ದ ರಾಘವೇಂದ್ರ ಅವಿವಾಹಿತನಾಗಿದ್ದು, ನರಸಿಂಹ- ಮೂಕಾ ದಂಪತಿಯ ಐವರು ಮಕ್ಕಳಲ್ಲಿ ಕಿರಿಯವ. ಇತ್ತೀಚೆಗೆ ಮನೆಯವರ ಬಳಿ ಆಸ್ತಿ ವಿಚಾರದಲ್ಲೂ ಆಗಾಗ್ಗೆ ತಗಾದೆ ತೆಗೆಯುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಮನೆ ಅಂಗಳದಲ್ಲಿ ಕಸಕ್ಕೆ ಬೆಂಕಿ ಹಾಕುವ ವಿಚಾರದಲ್ಲಿ ತಂದೆಯ ಜತೆ ವಾಗ್ವಾದ ನಡೆಸಿದ ಆರೋಪಿ ರಾಘವೇಂದ್ರ ಹಿಂದಿನಿಂದ ಬಂದು ಬೆನ್ನಿಗೆ, ತಲೆ ಹಾಗೂ ಮುಖಕ್ಕೆ ಕೈ ಕೊಡಲಿಯಿಂದ ಕಡಿದಿದ್ದಾನೆ. ಗಂಭೀರ ಗಾಯಗೊಂಡ ನರಸಿಂಹ ಅವರನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೃತ್ಯ ತಡೆಯಲು ಬಂದ ಆರೋಪಿಯ ಸಹೋದರಿ ಸುಜಾತಾ ಎಂಬುವರಿಗೂ ಕಡಿದಿದ್ದು, ಗಾಯಗೊಂಡ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ವಿಷ್ಣುವರ್ಧನ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net