

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಸ್ತ್ರಗಳ ಪ್ರಕಾರ 33 ಕೋಟಿ ದೇವತೆಗಳಿದ್ದರೂ ಯಾವ ದೇವರೂ ಮಾತನಾಡುವುದಿಲ್ಲ. ಆದರೆ ನಮ್ಮ ಇಹದ ಬದುಕಿನಲ್ಲಿನ ತಂದೆ&ತಾಯಿ ಮತ್ತು ಗುರು ಮಾತ್ರ ಜೀವಂತ ದೇವರು ಎಂಬ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಶಿರಕೋಳ ಹಿರೇಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಿರುವ ಶ್ರೀಕಲಬುಗಿರ್ ಶರಣ ಬಸವೇಶ್ವರರ ಪುರಾಣ ಪ್ರವಚನದಲ್ಲಿ ಭಾನುವಾರ ವಿಶೇಷ ಆಧ್ಯಾತ್ಮಿಕ ಉಪನ್ಯಾಸ ನೀಡಿದರು.
ನಮ್ಮ ಪೂರ್ವಜನರು ತಂದೆ&ತಾಯಿ ಮತ್ತು ಶ್ರೀ ಗುರುವಿನ ಮಹತ್ವ ಅರಿತು ಅವರಿಗೆ ದೇವರ ಸ್ಥಾನ ನೀಡಿದ್ದಾರೆ. ತಾಯಿಯ ಕಾರುಣ್ಯ, ವಾತ್ಸಲ್ಯ, ಅನುರಾಗಕ್ಕೆ ಎಂದೂ ಬೆಲೆ ಕಟ್ಟಲಾಗದು. ತ್ಯಾಗಮಯಿ ತಂದೆ ತನ್ನ ಬಯಕೆಗಳನ್ನು ಬದಿಗಿಟ್ಟು ಒಡಲ ಕುಡಿಗಳಿಗೆ ಮಾಡುವ ಸಮರ್ಪಣೆ ವಿಶಿಷ್ಟವಾದದ್ದು. ಇಂದು ಹಡೆದ ಮಕ್ಕಳೇ ತಂದೆ&ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಿರುವುದು ನೋವಿನ ಸಂಗತಿ ಎಂದರು.
ಡಾ. ಚೆನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪ್ರವಚನ ನೀಡಿ, ಅರಳಗುಂಡಿಗೆ ಸಾಲೋಕ್ಯ ಮನೆತನದ ಆದಯ್ಯ ಮತ್ತು ಮಡಿಯಮ್ಮ ಆದರ್ಶ ದಂಪತಿ. ಗುರು, ಲಿಂಗ, ಜಂಗಮ ಸೇವೆಗೆ ನಿರಂತರ ತೆರೆದುಕೊಂಡವರು. ಬಡವರು, ಅನಾಥರು, ನಿರ್ಗತಿಕರು, ಅಂಗವಿಕಲರ ಹಸಿವು, ನೋವುಗಳಿಗೆ ಸ್ಪಂದಿಸಿ ಹೊಟ್ಟೆ ತುಂಬ ಊಟ ನೀಡಿ ಖುಷಿಪಡುತ್ತಿದ್ದರು ಈ ದಂಪತಿ. ಆದರೆ ಅವರಿಗೆ ಸಂತಾನವೇ ಇರಲಿಲ್ಲ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವ ರೀತಿಯಲ್ಲಿ ದಂಪತಿಗೆ ಒಂದು ದಿನ ಶಿವನ ಕೃಪಾಕಾರುಣ್ಯ ಪ್ರಾಪ್ತವಾಗುತ್ತದೆ ಎಂದರು.
ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಿರೂಪಾಪ್ಪ ನವಲಗುಂದ, ಬಸಪ್ಪ ಯಡಳ್ಳಿ, ಮಲ್ಲಪ್ಪ ಕುಸುಗಲ್ಲ, ಬಸವಣ್ಣೆಪ್ಪ ಪೂಜಾರ, ಇತರರು ಇದ್ದರು.