ಅಪ್ಪ ಭರವಸೆಯ ಬೆಳಕು

23 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಪ್ಪ ಎಂದರೆ ಭರವಸೆಯ ಬೆಳಕು. ಅವನು ಆಕಾಶದಷ್ಟು ದೊಡ್ಡವನು. ಅಪ್ಪ ಪ್ರೀತಿ ಹಾಗೂ ಮಮತೆಯ ಗಣಿ ಎಂದು ವಿಶ್ರಾಂತ ಪ್ರಾಚಾರ್ಯ ಡಾ. ವೈ.ಎಂ. ಯಾಕೊಳ್ಳಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಧರಮಪ್ಪ ದೊಡ್ಡವಿರಪ್ಪ ಹೊರಕೇರಿ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಧಕ ಶಿಕ್ಷಕಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಹೊಸಗನ್ನಡ ಕಾವ್ಯದಲ್ಲಿ ಅಪ್ಪ ವಿಷಯ ಕುರಿತು ಮಾತನಾಡಿದರು.

ಅಪ್ಪನು ದೇವರು ಕರುಣಿಸಿದ ಬಹು ದೊಡ್ಡ ಉಡುಗೊರೆ. ಹೊಸಗನ್ನಡ ಕಾವ್ಯದಲ್ಲಿ ತಾಯಿ ಬಗ್ಗೆ ವಿವಿಸ್ತೃತ ವ್ಯಾಖ್ಯಾನಗಳಿರುವಂತೆ ತಂದೆ ಬಗ್ಗೆ ಕಡಿಮೆ. ಕಾವ್ಯದಲ್ಲಿ ಕವಿಗಳು ತಿಳಿಸಿದಂತೆ ಅಪ್ಪನು ಮಕ್ಕಳ ಪಾಲಿನ ಹೀರೋ. ನಮ್ಮ ಸಾಧನೆಗೆ ತಂದೆಯೇ ಸ್ಫೂರ್ತಿ ಎಂದು ಕಾವ್ಯಮಯವಾಗಿ ಹೇಳಿದ್ದಾರೆ. ಅಪ್ಪನ ಬಗ್ಗೆ ಎಲ್ಲೂ ನಕಾರಾತ್ಮಕ ವಿಚಾರಗಳಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಂಕರ ಹಲಗತ್ತಿ ಮಾತನಾಡಿ, ಅಪ್ಪ ಪ್ರೀತಿ ವಿಶ್ವಾಸದ ಸಾಕಾರಮೂರ್ತಿ. ಆತನ ಕುಟುಂಬದ ಹಿತಕ್ಕಾಗಿ ಶ್ರಮಿಸುತ್ತಿರುವ ಮಹಾಶಕ್ತಿ. ತಮ್ಮ ಮಕ್ಕಳ ಏಳ್ಗೆಗಾಗಿ ಬಾಲ್ಯದಲ್ಲಿ ಬದುಕಿನ ಪಾಠ ಕಲಿಸಿದ ಪುಣ್ಯಾತ್ಮ. ಧರಮಪ್ಪ ಹೊರಕೇರಿ ಓರ್ವ ಆದರ್ಶ ಶಿಕ್ಷಕರಾಗಿ ವೃತ್ತಿ ಧರ್ಮ ಕಾಪಾಡಿಕೊಂಡು ಕಷ್ಟದ ಹಾಗೂ ಕೊರತೆಯ ಮಧ್ಯೆ ಮಕ್ಕಳಿಗೆ ಒಳ್ಳೆ ಶಿಕ್ಷಣ, ಸಂಸ್ಕಾರ ನೀಡಿದವರು ಎಂದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ದಾಾಯಿಣಿ ಬಿರಾದಾರ ಅವರಿಗೆ ಹೊರಕೇರಿ ಮಾಸ್ತರ ಪ್ರತಿಷ್ಠಾನ ವತಿಯಿಂದ ಸಾಧಕ ಶಿಕ್ಷಕಿ ಪುರಸ್ಕಾರ ನೀಡಿ ಗೌರವಿಸಲಾಯಿತು. ದತ್ತಿದಾನಿ ಡಾ. ಲಿಂಗರಾಜ ಹೊರಕೇರಿ ದತ್ತಿ ಆಶಯ ಕುರಿತು ಮಾತನಾಡಿದರು.

ಡಾ. ಶೈಲಜಾ ಅಮರಶೆಟ್ಟಿ, ಡಾ. ಸುರೇಶ ಹೊರಕೇರಿ, ವಿ.ಜಿ. ಪಾಟೀಲ, ಸೋಮನಗೌಡ ಪಾಟೀಲ, ಡಾ. ಲಿಂಗರಾಜ ಅಂಗಡಿ, ಡಾ. ಬಸು ಬೇವಿನಗಿಡದ, ಬಸವಂತಪ್ಪ ತೋಟದ, ಅನಿಲ ಧಾರವಾಡಕರ, ಶಾಂತವೀರ ಬೆಟಗೇರಿ, ಇತರರು ಇದ್ದರು.

ಡಾ. ಸಂಜೀವ ಕುಲಕರ್ಣಿ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net