ಐಪಿಎಲ್ ಬೆಟ್ಟಿಂಗ್‌ಗಾಗಿ ಹಣ ಕದ್ದ ಮಗನ ಮೇಲೆ ದೂರು ನೀಡಿದ ತಂದೆ

betting
Published on

ಕನಕಪುರ

ಐಪಿಎಲ್ ಬೆಟ್ಟಿಂಗ್ ಆಡಲು ಮಾಡಿದ್ದ ಸಾಲ ತೀರಿಸಲು ಯುವಕನೊಬ್ಬ ಮನೆಯಲ್ಲೇ ಚಿನ್ನ ಹಾಗೂ ನಗದು ದೋಚಿದ ಪ್ರಕರಣ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಯುವಕ ಪೊಲೀಸರ ವಶದಲ್ಲಿದ್ದಾನೆ.

ಹಾರೋಹಳ್ಳಿ ತಾಲೂಕಿನ ದೊಡ್ಡಕಲ್ಲುಬಾಳು ಗ್ರಾಮದ ಪುಟ್ಟಸ್ವಾಮಿ ಎಂಬುವರ ಮಗ ಕೀರ್ತಿಗೌಡ (27) ಬಂಧಿತ. ಮನೆಯಲ್ಲಿ ಕಳವು ನಡೆದಾಗ ಮಗನ ಮೇಲೆ ಅನುಮಾನಗೊಂಡ ತಂದೆ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೀರ್ತಿಗೌಡ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ. ಜೂಜಾಡಲು ಹತ್ತಾರು ಲಕ್ಷ ರೂ. ಸಾಲ ಮಾಡಿದ್ದ.

ಪುಟ್ಟಸ್ವಾಮಿ ಅವರು ನ.7ರಂದು ಗ್ರಾಮಾಂತರ ಠಾಣೆಗೆ ದೂರು ನೀಡಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀರುವಿನಲ್ಲಿಟ್ಟಿದ್ದ 170 ಗ್ರಾಂ ಚಿನ್ನ ಹಾಗೂ 2 ಲಕ್ಷ ರೂ. ಕಳವಾಗಿದೆ ಎಂದುಮಗನ ಮೇಲೆಯೇ ಸಂಶಯವಿರುವುದಾಗಿ ತಿಳಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಲ್. ಕೃಷ್ಣ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಸಬ್ ಇನ್‌ಸ್ಪೆಕ್ಟರ್ ಮನೋಹರ್, ಎಎಸ್‌ಐ ಪದ್ಮಶಂಕರ್, ವಿನೋದ್, ಲಕ್ಷ್ಮಪ್ಪ, ಪುನೀತ್ ಹಾಗೂ ಸಿಬ್ಬಂದಿ ಕೀರ್ತಿಗೌಡನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ.

ಮನೆಯಲ್ಲಿ ಕದ್ದ ಚಿನ್ನವನ್ನು ಎಸ್‌ಆರ್‌ಆರ್ ಗೋಲ್ಡ್ ಹಾಗೂ ಚಂದ್ರಶೇಖರ್ ಎಂಬ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ. ಕದ್ದ ಚಿನ್ನವನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net