ಅಪಘಾತದಲ್ಲಿ ತಂದೆ, ಪುತ್ರಿ ಸಾವು

17Kush04
Published on


ಮಡಿಕೇರಿ: ಕುಶಾಲನಗರದ ಆನೆಕಾಡು ಹೆದ್ದಾರಿಯಲ್ಲಿ ಬುಧವಾರ ಮಾರುತಿ ವ್ಯಾನ್ ಹಾಗೂ ಬೊಲೆರೋ ಜೀಪ್ ನಡುವೆ ಅಪಘಾತ ಸಂಭವಿಸಿ ತಂದೆ ಮತ್ತು ಪುತ್ರಿ ಮೃತಪಟ್ಟಿದ್ದಾರೆ.


ಬಸವನಹಳ್ಳಿ ನಿವಾಸಿ ರಾಜೇಶ್ ದೇವಯ್ಯ(38) ಹಾಗೂ ಅವರ ಪುತ್ರಿ ನ್ಯಾನ್ಸಿ ಬೊಳ್ಳಮ್ಮ (3)ಮೃತ ದುರ್ದೈವಿಗಳು.


ರಾಜೇಶ್ ತನ್ನ ನಾದಿನಿ ಪುತ್ರಿಯ ನಾಮಕರಣಕ್ಕಾಗಿ ಪುತ್ರಿ ನ್ಯಾನ್ಸಿ ಬೊಳಮ್ಮ ಜತೆ ಮಡಿಕೇರಿಗೆ ಹೋಗಿದ್ದರು. ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ಬುಧವಾರ ವಾಪಸ್ ಬರುವ ವೇಳೆ ಕುಶಾಲನಗರದ ಆನೆಕಾಡು ಹೆದ್ದಾರಿಯಲ್ಲಿ ಕೂಲಿ ಕಾರ್ಮಿಕರ ಕರೆದುಕೊಂಡು ಬರುತ್ತಿದ್ದ ಬೊಲೆರೋ ಜೀಪ್ ನಡುವೆ ಅಪಘಾತ ಸಂಭವಿಸಿದೆ.

ಈ ವೇಳೆ ರಾಜೇಶ್ ದೇವಯ್ಯ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಅವರ ಪುತ್ರಿ ನ್ಯಾನ್ಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟರು. ಮರಣೋತ್ತರ ಪರೀಕ್ಷೆ ಬಳಿಕ ಪಾಲಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಇನ್ನು ಬೊಲೆರೋ ಚಾಲಕ ಅರುಣ್, ಕಾರ್ಮಿಕರಾದ ಜಯಲಕ್ಷ್ಮೀ, ನೀಲಮ್ಮ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕುಶಾಲನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net