ಹಳೇ ವೈಷಮ್ಯ ತಂದೆ&ಮಗನ ಮೇಲೆ ಹಲ್ಲೆ, ಕೊಲೆ ಬೆದರಿಕೆ

Published on

ಬಂಗಾರಪೇಟೆ: ಬೇರೆಯವರ ಹಸು ಜಮೀನಿನಲ್ಲಿ ಮೇಯ್ದಿದ್ದಕ್ಕೆ ನಿಮ್ಮದೇ ಹಸು ಮೇಯ್ದಿದೆ ಎಂದು ಆರೋಪಿಸಿ ಹಳೇ ವೈಷಮ್ಯದಿಂದ ತಂದೆ ಮತ್ತು ಮಗನ ಮೇಲೆ ದೊಣ್ಣೆ&ಕೋಲುಗಳಿಂದ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಲಾಗಿದೆ.

ತಾಲೂಕಿನ ದಾಸರ ಹೊಸಹಳ್ಳಿ ಮಂಜುನಾಥ್​ (41), ಮಗ ನವೀನ್​ (20) ಗಾಯಗೊಂಡಿದ್ದು, ಜಿಲ್ಲಾ ಎಸ್​.ಎನ್​.ಆರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಜುನಾಥ್​ ಮತ್ತು ಆರೋಪಿ ನಾರಾಯಣಪ್ಪ ಅವರ ಜಮೀನು ಅಕ್ಕಪಕ್ಕದಲ್ಲಿದ್ದು, 3 ತಿಂಗಳ ಹಿಂದೆ ಹಸು ಮೇವು ತಿಂದಿದ್ದರಿಂದ ಅವಾಚ್ಯ ಶಬ್ದದಿಂದ ನಾರಾಯಣಪ್ಪ ಮಂಜುನಾಥ್​ಗೆ ಬೈದಿದ್ದರು. ಅದಾದ ನಂತರ ಬುಧವಾರ ಸಂಜೆ ನವೀನ್​ ಮತ್ತು ಅವರ ತಂದೆ ಮಂಜುನಾಥ ಆರೋಪಿಯ ಜಮೀನಿನ ಬಳಿ ಹಸುಗಳನ್ನು ಹಿಡಿದುಕೊಂಡು ಬರುತ್ತಿದ್ದಾಗ ನಿಮ್ಮ ಹಸುಗಳೇ ನಮ್ಮ ಜಮೀನಿನಲ್ಲಿ ಮೇಯ್ದಿವೆ ಎಂದು ಹೇಳಿ ನವೀನ್​ ತಲೆಗೆ ಬಲವಾಗಿ ಹೊಡೆದಿದ್ದಾರೆ.

ಮಗನ ಮೇಲೆ ಹಲ್ಲೆಯಾಗುತ್ತಿದ್ದನ್ನು ನೋಡಿದ ತಂದೆ ಬಿಡಿಸಲು ಬಂದಾಗ ಅವರ ಮೇಲೂ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಲಾಗಿದೆ. ಗಾಯಾಳು ನವೀನ್​ ನೀಡಿದ ದೂರಿನ ಮೇಲೆ ಗ್ರಾಮದ ಗಿರೀಶ್​, ನಾರಾಯಣಪ್ಪ ಮತ್ತು ಸತೀಶ್​ ವಿರುದ್ಧ ಬಂಗಾರಪೇಟೆ ಪೊಲೀಸ್​ ಠಾಣೆೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net