ಮೈಸೂರು: ಸ್ನೇಹಿತನ ತಂಗಿ ಬಗ್ಗೆ ಅಪಪ್ರಚಾರ ಮಾಡದಂತೆ ಬುದ್ಧಿ ಹೇಳಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ 8 ಜನರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ರೌಡಿಶೀಟರ್ ಆಗಿದ್ದು, ಎರಡು ದಿನಗಳ ಹಿಂದೆಯಷ್ಟೇ ಗಡಿಪಾರು ಶಿಕ್ಷೆ ಮುಗಿಸಿ ವಾಪಸಾಗಿ ಈ ಕೃತ್ಯವೆಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆದರ್ಶ ಎಂಬಾತ ಹಲ್ಲೆಗೊಳಗಾದವನು. ಕಳ್ಳ ಶಿವು ಅಲಿಯಾಸ್ ಶಿವಕುಮಾರ್, ಪ್ರಜ್ವಲ್ ಅಲಿಯಾಸ್ ಸ್ಪಾಟ್, ಧನರಾಜ್ ಅಲಿಯಾಸ್ ಮನು, ಹೃಷಿತ್ ಅಲಿಯಾಶ್ ಕುಳ್ಳಿ, ಖಜಾನೆ, ಶರತ್, ಹಾಲು ಮಂಜ ಹಾಗೂ ಪವನ್ ಅಲಿಯಾಸ್ ಪಮ್ಮಿ ಬಂಧಿತ ಆರೋಪಿಗಳು.
ಆದರ್ಶ ಹಾಗೂ ಪ್ರಸಾದ್ ಸ್ನೇಹಿತರಾಗಿದ್ದು, ಪ್ರಜ್ವಲ್ ಎಂಬಾತ ಪ್ರಸಾದ್ ಅವರ ತಂಗಿ ವಿರುದ್ಧ ಅಪಪ್ರಚಾರ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಆದರ್ಶ ನಾಲ್ಕು ತಿಂಗಳ ಹಿಂದೆ ಆತನಿಗೆ ಬುದ್ಧಿವಾದ ಹೇಳಿದ್ದ. ಇದರಿಂದ ಕುಪಿತಗೊಂಡಿದ್ದ ಪ್ರಜ್ವಲ್ ತನ್ನ ಸಹಚರರೊಂದಿಗೆ ಫೆ.3ರಂದು ಹೂಟಗಳ್ಳಿಯ ಸಿಗ್ನಲ್ಲೈಟ್ ಬಳಿ ರಾತ್ರಿ ತನ್ನ ಸ್ನೇಹಿತರ ಜತೆ ಮಾತನಾಡುತ್ತ ಕುಳಿತಿದ್ದ ಆದರ್ಶನ ಮೇಲೆ ಹಲ್ಲೆ ಮಾಡಿದ್ದಾನೆ. ಕಳ್ಳ ಶಿವು ಅಲಿಯಾಸ್ ಶಿವಕುಮಾರ್ ರೌಡಿ ಶೀಟರ್ ಆಗಿದ್ದು, ಈತನನ್ನು ಗಡೀಪಾರು ಮಾಡಿ ಮಂಗಳೂರಿಗೆ ರವಾನೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.