ಅತಿಯಾದ ಧ್ವನಿವರ್ಧಕ ಬಳಕೆ ವಿರೋಧಿಸಿದವರ ಮೇಲೆ ಮಾರಣಾಂತಿಕ ಹಲ್ಲೆ

Crime Logo
Published on

ಕುಮಟಾ: ಸಾರ್ವಜನಿಕ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಅತಿಯಾದ ಧ್ವನಿವರ್ಧಕ ಬಳಕೆ ವಿರೋಧಿಸಿದ ವ್ಯಕ್ತಿಗಳ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಲನಗದ್ದೆಯ ಜ್ಯೋತಿ ತುಕಾರಾಮ ನಾಯ್ಕ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಸೆ. 4ರಂದು ಸಾಯಂಕಾಲ ನೆಲ್ಲಿಕೇರಿ ಹಳೇ ಬಸ್​ನಿಲ್ದಾಣ ಹತ್ತಿರ ಹೋದ ವೇಳೆ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ನನ್ನ ಮತ್ತು ಡಾ.ರವಿರಾಜ ಕಡ್ಲೆ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಡಾ. ರವಿರಾಜ ಕಡ್ಲೆಯವರಿಗೆ ಗಣಪತಿ ಪೆಂಡಾಲ ಒಳಗೆ ಸೆಳೆದೊಯ್ದು ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿದ್ದಾರೆ. ಇದನ್ನು ತಪ್ಪಿಸಲು ಹೋದ ನನ್ನ ಮೇಲೂ ಹಲ್ಲೆ ಮಾಡಿದ್ದು ಮಣಿಗಂಟು ಬೀಗುವಷ್ಟು ಹೊಡೆದಿದ್ದಾರೆ. ಈ ವೇಳೆ ಡಾ. ಕಡ್ಲೆಯವರನ್ನು ಸಾಯಿಸುವ ಮಾತನ್ನು ಹಲ್ಲೆಕೋರರು ಆಡಿದ್ದಾರೆ. ನನ್ನ ಮಾನಭಂಗ ಹಾಗೂ ಡಾ. ಕಡ್ಲೆ ಅವರ ಕೊಲೆಗೆ ಪ್ರಯತ್ನ ಮಾಡಿದ ಹಲ್ಲೆಕೋರರಾದ ನೆಲ್ಲಿಕೇರಿಯ ವಿನಾಯಕ ನಾಯಕ, ರಾಘವೇಂದ್ರ ಹಾಗೂ ಇತರ 40-50 ಮಂದಿಯನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂಬ ದೂರನ್ನು ಕುಮಟಾ ಠಾಣೆಯಲ್ಲಿ ದಾಖಲಿಸಿದ್ದಾರೆ.

ಪ್ರತಿ ದೂರು:

ಈ ದೂರಿಗೆ ಪ್ರತಿಯಾಗಿ ವಾಲ್ಗಳ್ಳಿ ಕಲಕೇರಿಯ ಗಣಪತಿ ಹನುಮಂತ ಮುಕ್ರಿ, ನೆಲ್ಲಿಕೇರಿ ಸಾರ್ವಜನಿಕ ಗಣೇಶ ಪೆಂಡಾಲ್ ಬಳಿ ಸಮಿತಿಯವರು ಖರ್ಚುವೆಚ್ಚಗಳ ಲೆಕ್ಕ ಮಾಡುತ್ತಿದ್ದಾಗ ಡಾ. ರವಿರಾಜ ಕಡ್ಲೆ ಹಾಗೂ ಜ್ಯೋತಿ ನಾಯ್ಕ ಎಂಬುವರು ಬಂದು ಜಾತಿ ನಿಂದನೆ ಹಾಗೂ ಹಲ್ಲೆ ಮಾಡಿದರು. ಬಿಡಿಸಲು ಬಂದವರ ಮೇಲೂ ಅವರು ಹಲ್ಲೆ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೋರಾಟ ಕಾರಣವೆ?

ಧ್ವನಿವರ್ಧಕ ಬಳಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸುವಂತೆ ನಾಗರಿಕ ಪ್ರಜ್ಞೆಯಿಂದ ಹಾಗೂ ಓರ್ವ ವೈದ್ಯರಾಗಿಯೂ ಡಾ. ರವಿರಾಜ ಕಡ್ಲೆ ಮತ್ತಿತರರು ಹೋರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ಸಾರ್ವಜನಿಕ ಗಣಪತಿ ವಿಸರ್ಜನೆ ವೇಳೆ ನಡುರಾತ್ರಿಯಲ್ಲೂ ಡಿಜೆ ಹಾಕಿದ್ದರ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಡಿಜೆ ಸಾಮಗ್ರಿ ವಶಪಡಿಸಿಕೊಂಡಿದ್ದರು.

ಪಟ್ಟಣದ ಹಳೇ ಬಸ್ ನಿಲ್ದಾಣದ ಎದುರು ಸಾರ್ವಜನಿಕ ರಸ್ತೆಯಲ್ಲಿ ಕೆಲ ವರ್ಷಗಳಿಂದ ಸ್ಥಾಪಿಸುತ್ತಿರುವ ಸಾರ್ವಜನಿಕ ಗಣಪತಿ ವಿಸರ್ಜನೆ ವೇಳೆ ಅತಿಯಾದ ಧ್ವನಿವರ್ಧಕ ಬಳಕೆಯಿಂದ ಸಮಸ್ಯೆಯಾಗುತ್ತಿರುವ ಕುರಿತು ಜ್ಯೋತಿ ನಾಯ್ಕ ದೂರಿದ್ದರು. ಇದರಿಂದ ಜ್ಯೋತಿ ಹಾಗೂ ಡಾ. ಕಡ್ಲೆ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನಲಾಗಿದೆ.

ಈಗ ಅವರ ಮೇಲೆ ನೆಲ್ಲಿಕೇರಿ ಸಾರ್ವಜನಿಕ ಗಣಪತಿ ಪೆಂಡಾಲ್​ನಲ್ಲಿ ಮಾರಣಾಂತಿಕ ಹಲ್ಲೆಯಾಗಿರುವುದು ನಾಗರಿಕ ಸಮಾಜದ ಧೋರಣೆಯನ್ನು ಪ್ರಶ್ನಿಸುವಂತೆ ಮಾಡಿದೆ. ಜನರ ಸುರಕ್ಷತೆಗಾಗಿ ಶಿಷ್ಟಾಚಾರ ಪಾಲಿಸಬೇಕಾದ ಪೊಲೀಸ್ ವ್ಯವಸ್ಥೆಯ ಮೇಲಿನ ವಿಶ್ವಾಸವೂ ಅಲುಗಾಡುತ್ತಿದೆ. ನಿಯಮಬಾಹಿರವಾಗಿ ಅತಿ ಹೆಚ್ಚು ಡೆಸಿಬಲ್​ನ ಧ್ವನಿವರ್ಧಕ ಬಳಕೆಯಿಂದ ಅನಾರೋಗ್ಯ ಪೀಡಿತರು, ವೃದ್ಧರು, ಗರ್ಭಿಣಿಯರು, ಒಳರೋಗಿಗಳಿಗೆ ಉಂಟಾಗುವ ಸಂಕಟದ ಬಗ್ಗೆ ಪಟ್ಟಣದಲ್ಲಿಯ ಆಸ್ಪತ್ರೆಯವರು ಗೊಣಗುತ್ತಿದ್ದರೂ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂಬ ಆಕ್ಷೇಪದ ಮಾತೂ ಕೇಳಿಬಂದಿದೆ.

ಕಾರ್ಯಕ್ರಮ ನಿಮಿತ್ತ ಶುಕ್ರವಾರ ಕುಮಟಾಕ್ಕೆ ಆಗಮಿಸಿದ್ದ ಎಸ್ಪಿ ದೀಪನ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನೆಲ್ಲಿಕೇರಿ ಪ್ರಕರಣದಲ್ಲಿ ಎರಡೂ ಕಡೆಯವರ ದೂರಿನ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನಿನಂತೆ ಕ್ರಮವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net