ರೈತ ಮುಖಂಡ ಹೆಗಡೆ ಮೇಲೆ ಮಾರಣಾಂತಿಕ ಹಲ್ಲೆ

yallappa
ದುಷ್ಕರ್ಮಿಗಳು ನಡೆಸಿದ ಹಲ್ಲೆಯಲ್ಲಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿರುವ ರೈತ ಮುಖಂಡ ಯಲ್ಲಪ್ಪ ಹೆಗಡೆ.
Published on

ಬಾಗಲಕೋಟೆ: ಬೀಳಗಿ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ, ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಸೋಮವಾರ ಮಾರಣಾಂತಿಕ ಹಲ್ಲೆ ನಡೆದಿದೆ.

ಮುಧೋಳದಿಂದ ಬೀಳಗಿಗೆ ಬರುವಾಗ ಮಾರ್ಗ ಮಧ್ಯೆ ಇಂಗಳಗಿ ಕ್ರಾಸ್‌ನಲ್ಲಿ ದುಷ್ಕರ್ಮಿಗಳು ಹೆಗಡೆ ಮೇಲೆ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದರಿಂದ ತಲೆಗೆ ಹತ್ತು ಹೊಲಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಇಂಗಳಗಿ ಕ್ರಾಸ್‌ನಲ್ಲಿ ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡಿದ್ದ ಕೆಲ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಹೆಗಡೆ ಅವರನ್ನು ಮುಧೋಳದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಯಲ್ಲಪ್ಪ ತಮ್ಮ ವಾಹನದಲ್ಲಿ ತೆರಳುತ್ತಿದ್ದಾಗ ಬೊಲೆರೋ ವಾಹನದಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಅವರ ವಾಹನ ಜಖಂಗೊಳಿಸಿ ಹಲ್ಲೆ ನಡೆಸಿದ್ದಾರೆ. ದಾಳಿ ನಡೆಸಿರುವ ಸುದ್ದಿ ತಿಳಿಯುತ್ತಿದ್ದಂತೆ ರೈತ ಮುಖಂಡರು, ವಿವಿಧ ಸಂಘಟನೆಗಳು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯನ್ನು ಖಂಡಿಸಿದ್ದಾರೆ. ಈ ದಾಳಿಯ ಹಿಂದೆ ರಾಜಕೀಯ ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಒತ್ತಿ ಹೇಳಿದ್ದು, ಈ ಬಗ್ಗೆ ದಾಳಿಕೋರರನ್ನು ಪತ್ತೆ ಮಾಡಬೇಕು ಹಾಗೂ ಇದರ ಹಿಂದೆ ಇರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಭಿಕ್ಷಾಟನೆಗೆ ತೆರಳುತ್ತಿದ್ದ ವೇಳೆ ದಾಳಿ ಎಂದ ಯಲ್ಲಪ್ಪ: ಯಲ್ಲಪ್ಪ ಹೆಗಡೆ ಅವರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೀಳಗಿ ಕ್ಷೇತ್ರದಲ್ಲಿ ರೈತ ಸಂಘದ ಬೆಂಬಲಿತ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಅಂದು ಹಾಲಿ ಶಾಸಕರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಈ ಬಗ್ಗೆ ಇತ್ತೀಚೆಗೆ ಮಾಜಿ ಸಚಿವರ ವಕೀಲರು ಯಲ್ಲಪ್ಪ ಅವರಿಗೆ ಲೀಗಲ್ ನೋಟಿಸ್ ನೀಡಿದ್ದರು.

ನಾನು ಸುದ್ದಿಗೋಷ್ಠಿ ನಡೆಸಿ ಲೀಗಲ್ ನೋಟಿಸ್ ಬಗ್ಗೆ ವಿವರಿಸಿ, ಭಿಕ್ಷಾಟನೆ ಅಭಿಯಾನ ನಡೆಸುವುದಾಗಿ ಹೇಳಿದ್ದೆ. ಸೋಮವಾರ ಬೀಳಗಿ ಕ್ಷೇತ್ರದಲ್ಲಿ ಭಿಕ್ಷಾಟನೆ ಅಭಿಯಾನಕ್ಕೆಂದು ಹೊರಟಿದ್ದಾಗ ದಾಳಿ ನಡೆದಿದೆ ಎಂದು ಆಸ್ಪತ್ರೆಯಲ್ಲಿ ಸುದ್ದಿಗಾರರ ಎದುರು ಯಲ್ಲಪ್ಪ ಆರೋಪಿಸಿದ್ದಾರೆ.

ದಾಳಿಗೆ ಸಚಿವರ ಖಂಡನೆ: ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ನಡೆದಿರುವ ಹಲ್ಲೆಯನ್ನು ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಖಂಡಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದಿರುವ ಸಚಿವರು, ಎಸ್ಪಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಂತೆ ಸೂಚನೆ ನೀಡಿದ್ದಾರೆ. ವೈದ್ಯರ ಜತೆ ಮಾತನಾಡಿ, ಯಲ್ಲಪ್ಪ ಅವರ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net