ಯುವತಿಗೆ ಮಾರಣಾಂತಿಕ ಹಲ್ಲೆ

Fatal assault on young woman
Fatal assault on young woman
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಅತ್ತಿಬೆಲೆ ಬಸ್ ನಿಲ್ದಾಣದ ಬಳಿ ಯುವತಿಗೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಯುವಕನನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಗಂಭೀರ ಗಾಯಗೊಂಡ ಬಾಗೇಪಲ್ಲಿ ಮೂಲದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸ್(26) ಬಂಧಿತ ಆರೋಪಿ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಬೀರಪ್ಪ ಹಾಗೂ ಹೋಟೆಲ್ ಮಾಲೀಕ ನವೀನ್ ಎಂಬುವರಿಗೆ ಗಾಯವಾಗಿದೆ.
ಪ್ರೀತಿಸುವಂತೆ ಯುವತಿ ಹಿಂದೆ ಬಿದ್ದಿದ್ದ ಆರೋಪಿ ಬುಧವಾರ ಯುವತಿ ಕೆಲಸ ಮಾಡುತ್ತಿದ್ದ ಹೋಟೆಲ್ ಬಳಿ ಬಂದು ಗಲಾಟೆ ಮಾಡಿದ್ದ. ಇದರಿಂದ ಕೋಪಗೊಂಡ ಯುವತಿ ಪೊಲೀಸರಿಗೆ ದೂರು ನೀಡುವುದಾಗಿ ಠಾಣೆಗೆ ಕಡೆಗೆ ಹೆಜ್ಜೆ ಹಾಕಿದ್ದಳು. ಇದರಿಂದ ಆಕ್ರೋಶಗೊಂಡ ಶ್ರೀನಿವಾಸ್ ಚಾಕುವಿನಿಂದ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಯುವತಿ ಕಿರುಚಾಡುವುದನ್ನು ಗಮನಿಸಿದ ಹೋಟೆಲ್ ಮಾಲೀಕ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕನ ಮೇಲೂ ಹಲ್ಲೆ ನಡೆಸಿದ್ದಾನೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹೋಟೆಲ್ ಮಾಲೀಕನನ್ನು ಗ್ರಾಮಾಂತರ ಅಡಿಷನಲ್ ಎಸ್‌ಪಿ ಪುರುಷೋತ್ತಮ್ ಶ್ಲಾಸಿದ್ದಾರೆ.

ಅತ್ತಿಬೆಲೆಗೆ ಬಂದಿದ್ದ ಯವತಿ:
ಒಂದೇ ಗ್ರಾಮದ ನಿವಾಸಿಯಾದ ಶ್ರೀನಿವಾಸ್ ಪ್ರೀತಿಸುವಂತೆ ಯುವತಿ ಹಿಂದೆ ಬಿದ್ದಿದ್ದ. ಆತನ ಕಾಟ ತಾಳಲಾರದೆ ಅತ್ತಿಬೆಲೆಗೆ ಬಂದಿದ್ದ ಯುವತಿ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ವಿಳಾಸ ಪತ್ತೆಹಚ್ಚಿದ್ದ ದುಷ್ಕರ್ಮಿ ಅತ್ತಿಬೆಲೆಗೆ ಬಂದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net