ಶಿರಸಿಯಲ್ಲಿ ಉಪವಾಸ ಸತ್ಯಾಗ್ರಹ 13ರಂದು

Published on

ಶಿರಸಿ: ಶಿರಸಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿ ಸತ್ಯಕ್ಕಾಗಿ ಆಗ್ರಹಿಸಿ ಜ.13ರಂದು ಬೆಳಗ್ಗೆ 9 ಗಂಟೆಗೆ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ತಹಸೀಲ್ದಾರ್ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಆಸ್ಪತ್ರೆಗೆ ಸಂಬಂಧಿಸಿ ಈಗಾಗಲೇ 112 ಕೋಟಿ ರೂ. ಸಿವಿಲ್ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಟೆಂಡರ್ ಆಗಿ ಕೆಲಸ ನಡೆಯುತ್ತಿದೆ. ಹೀಗಾಗಿ ಈಗಿನ ಶಾಸಕರು 44 ಕೋಟಿ ರೂ. ಅನುದಾನ ತಂದಿದ್ದಾರೆ ಎಂದು ಸಾರುವುದರಲ್ಲಿ ಅರ್ಥವೇ ಇಲ್ಲ. ಅದು ಯಾರೇ ಶಾಸಕರಿದ್ದರೂ ಬರುವಂಥದ್ದು. ಅದರಲ್ಲಿ ಶಾಸಕರ ಪ್ರಯತ್ನ ಇರುವುದಿಲ್ಲ. ಆದರೆ, ಈಗ ನಿಜವಾದ ಸಮಸ್ಯೆ ಇರುವುದು ಯಂತ್ರೋಪಕರಣಗಳ ವಿಚಾರದಲ್ಲಿ. ಯಂತ್ರೋಪಕರಣಗಳ ಖರೀದಿಗೆ ಘೋಷಿಸಿದ್ದ 30 ಕೋಟಿ ರೂ. ಅನುದಾನ ತರಲು ಶಾಸಕರು ಈಗ ವಿಶೇಷ ಪ್ರಯತ್ನ ಮಾಡಬೇಕೇ ಹೊರತು, ಈಗಾಗಲೇ ಮಂಜೂರಾಗಿರುವ ಕೆಲಸದಲ್ಲಲ್ಲ. ನಾವು ಇಲ್ಲಿ ರಾಜಕೀಯ ಮಾಡುತ್ತಿಲ್ಲ. ಕ್ಷೇತ್ರದ ಜನರ ಆಸ್ತಿಯಾಗಿರುವ ಆಸ್ಪತ್ರೆಯ ಹಕ್ಕನ್ನು ಕೇಳುತ್ತಿದ್ದೇವೆ. ಈ ವಿಷಯದಲ್ಲಿ ನಾವೂ ಶಾಸಕರ ಬೆನ್ನಿಗೆ ನಿಂತು ಹೋರಾಡಲು ಸಿದ್ಧರಿದ್ಧೇವೆ ಎಂದರು.

ಆಸ್ಪತ್ರೆಯ ವಿಚಾರದಲ್ಲಿ ನ್ಯಾಯ ಕೇಳಿ, ಸತ್ಯ ಹೇಳಲು ಆಗ್ರಹಿಸಿದರೆ ನನ್ನನ್ನು ಯಾವುದೋ ಪಕ್ಷಕ್ಕೆ, ಜಾತಿಗೆ ಸೀಮಿತಗೊಳಿಸಿ ವೈಯಕ್ತಿಕ ನಿಂದನೆ ಮಾಡುವುದನ್ನು ಒಪ್ಪತಕ್ಕದ್ದಲ್ಲ. ಡಾ. ಅಂಬೇಡ್ಕರ್ ಅವರ ಸಂವಿಧಾನದ ಅಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಮಾರಕ. ಹಾಗಾಗಿ ಸತ್ಯವನ್ನು ಹೇಳುವ ಕೆಲಸವಾಗಬೇಕೇ ಹೊರತು ವೈಯಕ್ತಿಕ ನಿಂದನೆಯಲ್ಲ ಎಂದರು.

ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ, ಜಯಶೀಲ ಗೌಡ ಬನವಾಸಿ, ಸಾಮಾಜಿಕ ಕಾರ್ಯಕರ್ತೆ ಉಷಾ ಹೆಗಡೆ, ಶಿವಾನಂದ ದೇಶಳ್ಳಿ, ಅನಿಲ ನಾಯಕ ಶಿರಸಿ, ಹರೀಶ ಕರ್ಕಿ, ಜಿ.ಎಸ್. ಹೆಗಡೆ, ಚಿದಾನಂದ ಹರಿಜನ, ನಾಗರಾಜ ಜೋಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net