

ಸಿರಗುಪ್ಪ: ನಗರದ ಕೆಇಬಿ ಕಚೇರಿ ಆವರಣದಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಅಂಗವಾಗಿ ಮಂಗಳವಾರ ಮಹಾಗಣಪತಿಗೆ ವಿಶೇಷ ಪೂಜೆ, ಹೋಮ, ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಹೋಮ ಹವನ ನೆರವೇರಿಸಿದ ಅರ್ಚಕ ಶಾಮಾಚಾರಿ ಮಾತನಾಡಿ, ಅಂಗಾರಕ ಸಂಕಷ್ಟಹರ ಚತುರ್ಥಿ ಹಿಂದುಗಳಿಗೆ ಶುಭ ಉಪವಾಸದ ದಿನವಾಗಿದ್ದು, ಮಂಗಳವಾರದಂದು ಬರುವ ಸಂಕಷ್ಟಹರ ಚತುರ್ಥಿಯನ್ನೇ ಅಂಗಾರಕ ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಿಂದು ಪಂಚಾಂಗದ ಪ್ರತಿ ಚಂದ್ರಮಾಸದ ಕೃಷ್ಣಪಕ್ಷ ಸಮಯದಲ್ಲಿ ಪೂರ್ಣಿಮಾ ನಂತರ ಚತುರ್ಥಿ ದಿನದಂದು ಉಪವಾಸವ್ರತ ಮಾಡಲಾಗುತ್ತದೆ.
ವ್ರತ ಆಚರಿಸುವ ಭಕ್ತರ ಇಷ್ಟಾರ್ಥಗಳನ್ನು ಗಣಪತಿ ಈಡೇರಿಸುತ್ತಾನೆ ಎಂದು ನಂಬಿಕೆ ಇದೆ. ಈ ದಿನ ಉಪವಾಸ ಮಾಡುವ ವ್ಯಕ್ತಿ ಗಣೇಶ ಮತ್ತು ಮಂಗಳ ಗ್ರಹಗಳ ಆಶೀರ್ವಾದ ಪಡೆಯುತ್ತಾನೆ. ಅಂತಹ ವ್ಯಕ್ತಿ ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ. ನೆಮ್ಮದಿ ಶಾಂತಿಯಿಂದ ಜೀವನ ನಡೆಸುತ್ತಾನೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದರು.