

ಮಂಡ್ಯ: ಕಾವೇರಿಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಶಿಫಾರಸು ಮಾಡುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ರೈತರ ಹಿತ ಕಡೆಗಣಿಸಿ ನೀರು ಹರಿಸಿದ ರಾಜ್ಯಸರ್ಕಾರದ ವಿರುದ್ಧ ಮದ್ದೂರು ತಾಲೂಕು ಕುದರಗುಂಡಿ ಗ್ರಾಮದ ರೈತರು ಉಪವಾಸ ಸತ್ಯಾಗ್ರಹ ನಡೆಸಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಗುರುವಾರ 115 ಹಾಗೂ ಸರದಿ ಉಪವಾಸ ಸತ್ಯಾಗ್ರಹ 34ನೇ ದಿನ ಪೂರೈಸಿತು. ಕುದರಗುಂಡಿ ಗ್ರಾಮದ ಕೆ.ಜೆ.ರಾಕೇಶ್, ಕೆ.ಟಿ.ಚಂದ್ರಶೇಖರ್, ಸಿದ್ದೇಗೌಡ, ಕೆ.ಬಿ.ಜಯರಾಣ, ಕೆ.ಸಿ.ನಾರಾಯಣ್, ಶಂಕರ್, ಕೆ.ಎಸ್.ನವೀನ್ ಉಪವಾಸ ನಿರತರಾಗಿದ್ದರು. ಇದರೊಂದಿಗೆ ಈವರೆಗೆ ಉಪವಾಸ ಸತ್ಯಾಗ್ರಹ ಮಾಡಿದವರ ಸಂಖ್ಯೆ 240 ಆದಂತಾಗಿದೆ.
ಕಾವೇರಿ ಹೋರಾಟಕ್ಕೆ ಆಳುವ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸಲಿಲ್ಲ. ಹೋರಾಟಗಾರರ ಜತೆ ಮಾತುಕತೆ ನಡೆಸುವ ಕನಿಷ್ಟ ಸೌಜನ್ಯವನ್ನು ಮಾಡಲಿಲ್ಲ. ಕೆಆರ್‌ಎಸ್ ಡ್ಯಾಂನಿಂದ ತ.ನಾಡಿಗೆ ನಿರಂತರವಾಗಿ ನೀರು ಹರಿಸಿ ರಾಜ್ಯದ ರೈತರಿಗೆ ದ್ರೋಹ ಮಾಡಿತು. ಇದರಿಂದಾಗಿ ಬೇಸಿಗೆ ಕಾಲದಲ್ಲಿ ನೀರಿನ ಹಾಹಾಕಾರ ಎದುರಾಗಲಿದೆ. ಆದರೂ ಸಹ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಧರಣಿಯಲ್ಲಿ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಕನ್ನಡಸೇನೆ ಮಂಜುನಾಥ್, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಕರಿಯಪ್ಪ, ಚನ್ನೇಗೌಡ, ಗಣೇಶ್ ಇತರರಿದ್ದರು.