

ಮಂಡ್ಯ: ತಮಿಳುನಾಡಿಗೆ ಪ್ರತಿನಿತ್ಯ 2,700 ಕ್ಯೂಸೆಕ್‌ನಂತೆ ಒಂದು ತಿಂಗಳು ಕಾವೇರಿ ನೀರು ಹರಿಸಬೇಕೆಂದು ಆದೇಶ ನೀಡಿರುವುದನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯನ್ನು ಉಪವಾಸ ಸತ್ಯಾಗ್ರಹವಾಗಿ ಪರಿವರ್ತಿಸಲಾಗಿದೆ. ಅದರಂತೆ ಶನಿವಾರದಿಂದ ಧರಣಿ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಯಿತು.
ಕಾವೇರಿ ನದಿ ನೀರು ನಿರ್ವಹಣ ಸಮಿತಿ ಹಾಗೂ ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರದ ಅವೈಜ್ಞಾನಿಕ ಆದೇಶ ಮತ್ತು ರೈತರ ಹಿತವನ್ನು ಕಡೆಗಣಿಸಿ ತ.ನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.
ಅಂತೆಯೇ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ತೀವ್ರಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಅದರ ಅಂಗವಾಗಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗಿದೆ. ಪ್ರತಿದಿನ ಒಂದೊಂದು ತಂಡ ಬೆಳಗ್ಗೆಯಿಂದ ಸಂಜೆವರೆಗೆ ಉಪವಾಸ ಮಾಡಲಿದ್ದಾರೆ. ಮುಂದಿನ ದಿನದಲ್ಲಿ ಸರ್ಕಾರಿ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ.