ತಿಂಗಳೊಳಗೆ ವೇಗದ ಇಂಟರ್​ನೆಟ್ ಸೌಲಭ್ಯ

sirsi Kagegi
Published on

ಶಿರಸಿ: ಜಿಲ್ಲೆಯ ಬಿಎಸ್​ಎನ್​ಎಲ್ ವ್ಯವಸ್ಥೆಗೆ ಆಧುನಿಕ ಯಂತ್ರೋಪಕರಣ ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಮುಂದಿನ ಒಂದು ತಿಂಗಳೊಳಗಾಗಿ ಜಿಲ್ಲೆಯಲ್ಲಿ ವೇಗದ ಇಂಟರ್​ನೆಟ್ ಸೌಲಭ್ಯ ದೊರೆಯಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಸೋಮವಾರ ಕರೆದಿದ್ದ ಬಿಎಸ್​ಎನ್​ಎಲ್ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಮೊಬೈಲ್ ಟಾವರ್ ಮತ್ತು ಕೇಬಲ್ ಸಂಪರ್ಕದಲ್ಲಿ ಹೊಸ ಯಂತ್ರೋಪಕರಣಗಳು ಚೆನ್ನೈನ ಮತ್ತು ಹೊರರಾಜ್ಯಗಳ ಇಂಟರ್​ನೆಟ್ ಸರ್ವರ್​ಗೆ ವೇಗವಾಗಿ ಸಂಪರ್ಕ ಒದಗಿಸಲಿದೆ. ಇದರಿಂದಾಗಿ ಜಿಲ್ಲೆಯ ಅಂತರ್ಜಾಲ ವ್ಯವಸ್ಥೆ ಆಧುನಿಕತೆ ಪಡೆದುಕೊಳ್ಳಲಿದೆ. ಮೊಬೈಲ್ ಗೋಪುರಗಳ ಕಾರ್ಯ ವ್ಯಾಪ್ತಿಯೂ ಜಾಸ್ತಿಗೊಳ್ಳುವ ಜತೆಗೆ ಕರೆಗಳ ಅನಿರೀಕ್ಷಿತ ಕಡಿತ, ಇಂಟರ್​ನೆಟ್ ವೇಗದಲ್ಲಿ ಉಂಟಾಗುವ ಸಮಸ್ಯೆ ಬಗೆಹರಿಯಲಿದೆ. ಜಿಲ್ಲೆಯ 245 ಹಳೆಯ 2ಜಿ ಮೊಬೈಲ್ ಟಾವರ್​ಗಳಲ್ಲಿ ಈಗಾಗಲೇ 145 ಟಾವರ್​ಗಳನ್ನು 4ಜಿ ತಂತ್ರಜ್ಞಾನಕ್ಕೆ ಬದಲಾಯಿಸಲಾಗಿದೆ. ಈ ಟಾವರ್​ಗಳಲ್ಲಿ ಹೊಸ ಬ್ಯಾಟರಿ ಅಳವಡಿಕೆ ಮಾಡಲಾಗಿದೆ. ಇನ್ನೂ 100 ಟಾವರ್​ಗಳ ಉನ್ನತೀಕರಣ ಹಾಗೂ ಬ್ಯಾಟರಿ ಅಳವಡಿಕೆ ಕಾರ್ಯ ಕೂಡ ಶೀಘ್ರವಾಗಿ ನಡೆಸಲಾಗುತ್ತದೆ ಎಂದರು.

4ಜಿ ಸ್ಯಾಚುರೇಶನ್ ಯೋಜನೆಯಡಿ ಜಿಲ್ಲೆಗೆ 244 ಮೊಬೈಲ್ ಗೋಪುರಗಳು ಮಂಜೂರಾಗಿದ್ದವು. ಇವುಗಳ ನಿರ್ಮಾಣ ಕಾರ್ಯ ಈಗ ಭರದಿಂದ ನಡೆಯುತ್ತಿದೆ. ಈಗಾಗಲೇ 67 ಮೊಬೈಲ್ ಗೋಪುರಗಳು ಕಾರ್ಯಾರಂಭ ಮಾಡಿದ್ದು, ಸ್ಥಳೀಯರ ಬಳಕೆಗೆ ಲಭ್ಯವಾಗಿವೆ. ಉದ್ಘಾಟನೆಗೆ ಕಾಯದೇ ಸಿದ್ಧಗೊಂಡ ಮೊಬೈಲ್ ಗೋಪುರಗಳನ್ನು ಆರಂಭಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಯೋಜನೆಯಡಿ ಕೈಗೆತ್ತಿಕೊಳ್ಳಲಾದ 160 ಹಳ್ಳಿಗಳಲ್ಲಿ ಟಾವರ್ ನಿರ್ವಿುಸಲು ಅರಣ್ಯ ಇಲಾಖೆಯಿಂದ ಜಾಗ ಮಂಜೂರಾತಿಗೆ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರ ಸಹ ಇದು ಕೇಂದ್ರ ಸರ್ಕಾರದ ಯೋಜನೆ ಎಂಬ ನಿರ್ಲಕ್ಷ್ಯಭಾವದಿಂದ ಇರುವುದು ಸಮಸ್ಯೆ ಆಗಿದೆ. ಅಧಿಕಾರಿಗಳು ಮೊಬೈಲ್ ಟಾವರ್ ನಿರ್ವಣಕ್ಕೆ ಗುರುತಿಸಲಾದ ಅರಣ್ಯ ಜಾಗವನ್ನು ಮಂಜೂರು ಮಾಡಲು ಯತ್ನಿಸಬೇಕು. ಗುತ್ತಿಗೆದಾರರಾದ ಬೊಂಡಾಡಾ ಇಂಜಿನಿಯರಿಂಗ್ ಕಂಪನಿ, ಉಪಗುತ್ತಿಗೆದಾರರಿಗೂ ಈ ಕುರಿತಂತೆ ಸೂಚನೆ ನೀಡಲಾಗಿದ್ದು, ಜೂನ್ ಅಂತ್ಯದೊಳಗೆ ಜಾಗ ಮಂಜೂರಿಗೆ ಯತ್ನಿಸಬೇಕು. ಮುಂಬರುವ ಅಕ್ಟೋಬರ್ ಅಂತ್ಯದ ಒಳಗಾಗಿ ಸ್ಯಾಚುರೇಶನ್ ಪ್ರಾಜೆಕ್ಟ್ ನ ಜಿಲ್ಲೆಯ ಎಲ್ಲ 244 ಮೊಬೈಲ್ ಗೋಪುರಗಳು ಕಾರ್ಯಾರಂಭ ಮಾಡಲಿವೆ ಎಂದರು.

ಬಿಎಸ್​ಎನ್​ಎಲ್ ಕರ್ನಾಟಕದ ಮುಖ್ಯಸ್ಥೆ ಸಿಜೆಎಂ ಎನ್. ಸುಜಾತಾ, ಹಿರಿಯ ಅಧಿಕಾರಿಗಳಾದ ನವೀನ ಗುಪ್ತಾ, ಸುಜಿತ್ ಕುಮಾರ, ಭಗವಾನ್ ಸ್ವರೂಪ್, ಇತರರಿದ್ದರು.

ಜಾಗದ ಸಮೀಕ್ಷೆ ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶ ಜಾಸ್ತಿ ಹೊಂದಿರುವ ಕಾರಣ ಮೊಬೈಲ್ ಗೋಪುರಗಳ ವ್ಯಾಪ್ತಿ ನಿರೀಕ್ಷಿತ ಮಟ್ಟದಲ್ಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಟಾವರ್​ಗಳನ್ನು ಜಿಲ್ಲೆಗೆ ಮಂಜೂರು ಮಾಡಿಸಿದ್ದು, ಇದರಲ್ಲಿ 65 ಟಾವರ್​ಗಳಿಗೆ ಆಯಾ ಹಳ್ಳಿಗಳಲ್ಲಿ ಸೂಕ್ತ ಜಾಗ ಗುರುತಿಸಬೇಕಾಗಿದೆ. ಎತ್ತರದ ಜಾಗ ಮತ್ತು ಹೆಚ್ಚು ಜನರಿಗೆ ತಲುಪುವ ಜಾಗವನ್ನು ಬಿಎಸ್​ಎನ್​ಎಲ್ ಅಧಿಕಾರಿಗಳೇ ಸಮೀಕ್ಷೆ ನಡೆಸಬೇಕು. ಈ ಹೆಚ್ಚುವರಿ ಟಾವರ್​ಗಳ ನಿರ್ವಣದಿಂದ ಜಿಲ್ಲೆಯಲ್ಲಿ ಬಹುತೇಕ ಎಲ್ಲ ಹಳ್ಳಿಗಳೂ ಮೊಬೈಲ್ ಸಂಪರ್ಕ ವ್ಯಾಪ್ತಿಗೆ ಬಂದಂತಾಗಲಿವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಜನಸಂಖ್ಯೆ ಹೆಚ್ಚಿರುವ ಮತ್ತು ಮೊಬೈಲ್ ಟಾವರ್ ಸಾಮರ್ಥ್ಯ ಸಾಕಾಗದ ಸ್ಥಳಗಳಲ್ಲಿ ಹೆಚ್ಚುವರಿ ಬೂಸ್ಟರ್ ಅಳವಡಿಸುವಂತೆ ಸೂಚಿಸಿದ್ದೇನೆ. ಈ ಕುರಿತಂತೆ ಎಲ್ಲ ಮೊಬೈಲ್ ಗೋಪುರಗಳನ್ನು ಬಿಎಸ್​ಎನ್​ಎಲ್ ಇಂಜಿನಿಯರ್​ಗಳು ಸಮೀಕ್ಷೆ ನಡೆಸಲಿದ್ದಾರೆ. | ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net