ಫಾಸ್ಟ್‌ಫುಡ್, ಚಾಟ್ ಸೆಂಟರ್ ತೆರೆಯಲು ಅವಕಾಶವಿಲ್ಲ

chat centre
Published on

ಮೈಸೂರು: ನಗರದಲ್ಲಿ ಫಾಸ್ಟ್‌ಫುಡ್, ಚಾಟ್ ಸೆಂಟರ್, ಚಹಾ ಅಂಗಡಿ ತೆರೆಯಲು ಅವಕಾಶವಿಲ್ಲ. ನಿಯಮ ಮೀರಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ.

4ನೇ ಲಾಕ್‌ಡೌನ್‌ನಲ್ಲಿ ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ನೀಡುತ್ತಿದ್ದಂತೆ ನಗರದ ವಿವಿಧೆಡೆ ಕಳೆದ ಎರಡು ದಿನಗಳಿಂದ ಫಾಸ್ಟ್‌ಫುಡ್, ಚಾಟ್ಸ್ ಸೆಂಟರ್‌ಗಳು ಪುನರಾರಂಭವಾಗಿದ್ದವು. 57 ದಿನಗಳಿಂದ ಮನೆಯಲ್ಲೇ ಇದ್ದ ಜನರು, ಪರಸ್ಪರ ಅಂತರ ಕಾಯ್ದುಕೊಳ್ಳದೆ ಫಾಸ್ಟ್‌ಫುಡ್, ಚಾಟ್ಸ್ ತಿನ್ನಲು ಮುಗಿಬಿದ್ದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು. ಇದೀಗ ನಿಯಮ ಬಾಹಿರವಾಗಿ ವಹಿವಾಟು ಆರಂಭಿಸಿರುವ ಈ ಅಂಗಡಿಗಳಿಗೆ ಬೀಗ ಹಾಕಿಸಲು ಪಾಲಿಕೆ ಮುಂದಾಗಿದೆ.

‘ಫಾಸ್ಟ್‌ಫುಡ್, ಟೀ ಅಂಗಡಿ, ಚಾಟ್ಸ್ ಸೆಂಟರ್ ತೆರೆಯಲು ಅವಕಾಶ ನೀಡಿಲ್ಲ. ಈಗಾಗಲೇ ಇದಕ್ಕೆ ಸಂಬಂಧಿಸಿದ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಕರೊನಾ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಮುಗಿಯುವವರೆಗೂ ಇವುಗಳನ್ನು ತೆರೆಯದಂತೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಕೆಲವರು ನಿಯಮ ಸಡಿಲಿಕೆಯಿಂದ ನಮಗೂ ವಿನಾಯಿತಿ ದೊರೆಯಿತೆಂಬ ತಪ್ಪು ಕಲ್ಪನೆಯಿಂದ ಇವುಗಳನ್ನು ತೆರೆದಿರುವುದು ಗಮನಕ್ಕೆ ಬಂದಿದೆ’ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.

ಪಾಲಿಕೆಯ ಎಲ್ಲ 9 ವಲಯಗಳ ಪರಿಸರ ಇಂಜಿನಿಯರ್‌ಗಳು, ಆರೋಗ್ಯಾಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಲಾಗಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಬರುವವರೆಗೂ ಸೆಂಟರ್ ತೆರೆಯಲು ಅವಕಾಶ ನೀಡಬಾರದು. ಸಿಬ್ಬಂದಿ ಮಾತಿಗೆ ಮನ್ನಣೆ ನೀಡದಿದ್ದರೆ, ಸ್ಥಳೀಯ ಪೊಲೀಸರ ನೆರವು ಪಡೆದು ಬಾಗಿಲು ಹಾಕಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಹೂವು ಮಾರಾಟಕ್ಕೆ ಅನುಮತಿ: ರಸ್ತೆಬದಿ ಹಣ್ಣು, ತರಕಾರಿ ಮಾರಾಟಕ್ಕೆ ಈ ಹಿಂದಿನಿಂದಲೂ ನಿರ್ಬಂಧ ಹೇರಿಲ್ಲ. ಈಗಲೂ ಮಾರಾಟ ಮಾಡಬಹುದು. ಈಗ ಹೂವು ವ್ಯಾಪಾರಕ್ಕೂ ಅನುಮತಿ ನೀಡಲಾಗಿದೆ. ಇದರೊಂದಿಗೆ ಸ್ಟೀಲ್, ಪ್ಲಾಸ್ಟಿಕ್ ಪದಾರ್ಥ, ಬಟ್ಟೆ ವ್ಯಾಪಾರವನ್ನೂ ಮಾಡಬಹುದಾಗಿದೆ. ಆದರೆ ತಿಂಡಿ-ತಿನಿಸುವ ಮಾರಾಟಕ್ಕೆ ಅವಕಾಶ ನೀಡಿಲ್ಲ ಎಂದರು.

ಬೇಕರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಬೇಕರಿಯಲ್ಲೇ ಗ್ರಾಹಕರಿಗೆ ತಿನ್ನಲು ಅವಕಾಶ ನೀಡದಂತೆ ಸೂಚಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net