ಮೈಸೂರು ದಸರಾದಲ್ಲಿ ಫ್ಯಾಷನ್ ಶೋ ಬಿನ್ನಾಣ

mysore
Published on

ಮೈಸೂರು: ಮಹಿಳೆಯರ ಫ್ಯಾಷನ್ ಶೋ ಕಣ್ಮನ ಸೆಳೆಯಿತು. ಜೆ.ಕೆ.ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 3ನೇ ದಿನ ಮಹಿಳಾ ದಸರಾದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಮೇಳೈಸಿದ್ದವು. ಅದರಲ್ಲಿ ಫ್ಯಾಷನ್ ಶೋ ಎಲ್ಲರನ್ನೂ ಆಕರ್ಷಿಸಿತು.


ವಿವಿಧ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಉಡುಗೆಗಳನ್ನು ತೊಟ್ಟ ಮಹಿಳೆಯರು, ಯುವತಿಯರು ರ‌್ಯಾಂಪ್ ಮೇಲೆ ವಯ್ಯರದಿಂದ ಹೆಜ್ಜೆ ಹಾಕಿದರು. ಕೊಡಗು, ಕೇರಳ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹೀಗೆ ವಿವಿಧ ಭಾಗದ ಸಾಂಪ್ರದಾಯಿಕ ಧರಿಸಿನಲ್ಲಿ ಯುವತಿಯರು ಮಿಂಚಿದರು.

ಕೆಲ ಯುವತಿಯರು ಆಧುನಿಕ ಉಡುಗೆಯಲ್ಲೂ ಗಮನ ಸೆಳೆದರು. ಸೀರೆ ತೊಟ್ಟ ಗೃಹಿಣಿಯರ ನೃತ್ಯ ಹೆಚ್ಚಿನ ಚಪ್ಪಾಳೆಯನ್ನು ಗಿಟ್ಟಿಸಿತು.
ಜತೆಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು. ಚಿತ್ರದುರ್ಗದ ಕೋಟೆಯನ್ನು ಶತ್ರು ಸೈನ್ಯದಿಂದ ಸಂರಕ್ಷಣೆ ಮಾಡುವ ಮೂಲಕ ಧೈರ್ಯ, ಶೌರ್ಯ ಮೆರೆದ ಒನಕೆ ಓಬವ್ವ ಕಥೆಯನ್ನು ಪಿರಿಯಾಪಟ್ಟಣದ ಮಹಿಳೆಯರು ಸೊಗಸಾಗಿ ಪ್ರಸ್ತುತ ಪಡಿಸಿದರು. ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಸಾಹಸವನ್ನು ಅಭಿಯಾನದ ಮೂಲಕ ಓಬವ್ವ ಅವರನ್ನು ಸಭಿಕರಿಗೆ ಪರಿಚಯಿಸಿದರು.


ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ರಾಣಿ ಮಾಚಯ್ಯ ಅವರು ಕೊಡಗಿನ ಉಮ್ಮತತ್ ಜಾನಪದ ನೃತ್ಯ ಕಲೆಯ ಕುರಿತು ಪರಿಚಯಿಸಿದರು. ಬಳಿಕ ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಇವರ ಶಿಷ್ಯೆಯರು ಉಮ್ಮತತ್ ಜಾನಪದ ನೃತ್ಯ ವಿಶಿಷ್ಟವಾಗಿ ಪ್ರದರ್ಶಿಸಿದರು. ಜೇನುತುಪ್ಪ ಮಾರಾಟ ಸಂಸ್ಥೆಯಾದ ನೆಕ್ಟರ್ ಫ್ರೆಶ್‌ನ ಸಂಸ್ಥಾಪಕಿ ಛಾಯಾ ನಂಜಪ್ಪ ಅವರೊಂದಿಗೆ ಸಂವಾದ ನಡೆಯಿತು.


ವೇದಿಕೆ ಆಕ್ರಮಿಸಿಕೊಂಡ ಮಹಿಳಾ ದಸರಾ ಅಧಿಕಾರೇತರ ಸಮಿತಿಯ ಸದಸ್ಯರ ದರ್ಬಾರ್ ಎದ್ದುಕಂಡಿತು. ಕನಿಷ್ಠ 50-60 ಸದಸ್ಯರು ಕುರ್ಚಿಯಲ್ಲಿ ಆಸೀನರಾಗಿ ಕುಳಿತುಕೊಳ್ಳುವ ಮೂಲಕ ವೇದಿಕೆ ಆಕ್ರಮಿಸಿಕೊಂಡರು. ಇದು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕೂ ಅಡ್ಡಿ ಉಂಟಾಯಿತು. ಕಲಾವಿದರ ಓಡಾಟಕ್ಕೂ ಅಡಚಣೆಯಾಯಿತು.

ಈ ಸದಸ್ಯರ ಎದುರಿಗೆ ಕಲಾವಿದರು ನಾಟಕ, ನೃತ್ಯ ಪ್ರದರ್ಶನ ಮಾಡಬೇಕಾದ ಅನಿವಾರ್ಯ ಎದುರಾಯಿತು. ಆದಾಗ್ಯೂ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ವಿವಿಧ ಅಧಿಕಾರಿಗಳಿದ್ದರೂ ಅವರೇನು ಹೇಳಲಿಲ್ಲ. ಸದಸ್ಯರ ವರ್ತನೆ ಕುರಿತು ಸಭಿಕರಿಂದ ಆಕ್ರೋಶ ವ್ಯಕ್ತವಾಯಿತು. ಬಳಿಕ ಸದಸ್ಯರು ವೇದಿಕೆಯಿಂದ ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net