ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ಬಲಿಯಾಗದಿರಿ

04-DVD-1
Published on

ದೇವದುರ್ಗ: ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವುದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆ ತಾಲೂಕು ಯೋಜನಾಧಿಕಾರಿ ರಾಜೇಶ್ ಎಂ.ಕಾನರ್ಪ ತಿಳಿಸಿದರು.

ಪಟ್ಟಣದ ಗೌರಂಪೇಟೆ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಮದ್ಯವ್ಯಸನಿಗಳಿಗೆ ಕುಡಿತ ಬಿಡಿಸಲು ಮದ್ಯ ವರ್ಜನ ಶಿಬಿರ ಆಯೋಜಿಸಿ ಹಲವು ಕುಟುಂಬಗಳ ಬದುಕಿಗೆ ಸಂಸ್ಥೆ ಬೆಳಕಾಗಿದೆ ಎಂದರು.

ತಂಬಾಕು ಸೇವನೆ ಅತ್ಯಂತ ಅಪಾಯಕಾರಿಯಾಗಿದ್ದು, ಬೀಡಿ ಸಿಗರೇಟ್, ಗುಟ್ಖಾ, ಪಾನ್ ಸೇವನೆ ಜೀವಕ್ಕೆ ಕುತ್ತು ತರುತ್ತವೆ. ಈ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಯುವಕರು ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ಬಲಿಯಾಗಬಾರದು. ಪಾಲಕರ ಗೌರವ ಉಳಿಸುವುದಕ್ಕಾಗಿ ಉತ್ತಮ ಪ್ರಜೆಯಾಗಬೇಕು. ಆರೋಗ್ಯ ಎಂಬ ಸಂಪತ್ತನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ವ್ಯಸನ ಮುಕ್ತ ಬದುಕಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮದ್ಯ ವರ್ಜನ ಶಿಬಿರದ ಮಾದರಿಯಲ್ಲೇ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ ಎಂದು ರಾಜೇಶ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net