3 ಕೋಟಿ ರೂ.ಬೆಳೆ ವಿಮೆ ಪರಿಹಾರ ಬಾಕಿ

Arecanut
Published on

ಗೋಪಾಲಕೃಷ್ಣ ಪಾದೂರು, ಉಡುಪಿ

ಅಡಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಉಪಯುಕ್ತವಾಗಿದ್ದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಕಳೆದ 4 ವರ್ಷಗಳಲ್ಲಿ 64.81 ಲಕ್ಷ ರೂ. ಪ್ರೀಮಿಯಂ ಮೊತ್ತಕ್ಕೆ 3 ಕೋಟಿ ರೂ.ಗೂ ಅಧಿಕ ಪರಿಹಾರ ಪಾವತಿ ಬಾಕಿ ಇದೆ. ಆರ್‌ಟಿಸಿಯಲ್ಲಿ ದಾಖಲಿಸಿದ ಬೆಳೆ ಹಾಗೂ ಬೆಳೆ ಸಮೀಕ್ಷೆಯ ದಾಖಲೆ ಹೊಂದಾಣಿಕೆ ಆಗದಿರುವುದೇ ಪ್ರಮುಖ ಸಮಸ್ಯೆಯಾಗಿ, ರೈತರು ಕಷ್ಟ ಪಡುವಂತಾಗಿದೆ.

ಕಾರ್ಕಳ ತಾಲೂಕಿನಲ್ಲಿ 275, ಕುಂದಾಪುರ 595, ಉಡುಪಿಯಲ್ಲಿ 302 ಮಂದಿ ಸೇರಿ ಒಟ್ಟು 1,172 ರೈತರಿಗೆ ಪರಿಹಾರ ಮೊತ್ತ ಪಾವತಿ ಆಗಿಲ್ಲ. ಜಿಲ್ಲೆಯಲ್ಲಿ ಸರ್ಕಾರ ಅಡಕೆ ಎಕರೆಗೆ 51,200 ರೂ. ಹಾಗೂ ಕಾಳುಮೆಣಸು ಎಕರೆಗೆ 19 ಸಾವಿರ ರೂ.ವಿಮೆ ಹಣ ನಿಗದಿ ಮಾಡಿದೆ. ಪ್ರೀಮಿಯಂ ಮೊತ್ತದಲ್ಲಿ ಶೇ.5ರಷ್ಟು ರೈತರು ಪಾವತಿಸಬೇಕು. ಉಳಿದ ಹಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಶೇ. 50ರ ಅನುಪಾತದಲ್ಲಿ ನೀಡುತ್ತದೆ.

2016-17ನೇ ಸಾಲಿನಲ್ಲಿ 1.84 ಕೋಟಿ ರೂ.ವಿಮೆ ಪರಿಹಾರ ನೀಡಲಾಗಿತ್ತು. 4.76 ಲಕ್ಷ ರೂ.ವಿಮೆ ಮೊತ್ತಕ್ಕೆ ಅಂದಾಜು 70 ಲಕ್ಷ ರೂ.ನೀಡಲು ಬಾಕಿ ಇದೆ. 2017-18ನೇ ಸಾಲಿನಲ್ಲಿ 991 ರೈತರು ನೋಂದಣಿ ಮಾಡಿದ್ದು, ಎಲ್ಲರಿಗೂ 1.11 ಕೋಟಿ ರೂ.ಪರಿಹಾರ ಲಭಿಸಿದೆ. 2018-19ನೇ ಸಾಲಿನಲ್ಲಿ 5.12 ಕೋಟಿ ರೂ. ಪರಿಹಾರ ನೀಡಲಾಗಿತ್ತು. 15.10 ಲಕ್ಷ ರೂ.ವಿಮಾ ಮೊತ್ತಕ್ಕೆ 1 ಕೋಟಿ ರೂ. ಬಾಕಿ ಇದೆ. 2019-20ನೇ ಸಾಲಿನಲ್ಲಿ 6.17 ಕೋಟಿ ರೂ.ಪಾವತಿಸಿ, 45 ಲಕ್ಷ ರೂ. ವಿಮಾ ಮೊತ್ತಕ್ಕೆ 2 ಕೋಟಿ ರೂ.ಪರಿಹಾರ ಧನ ಉಳಿದುಕೊಂಡಿದೆ.

ಮ್ಯಾಚ್ ಆಗದ ದಾಖಲೆ

ಹೆಚ್ಚಿನ ಪ್ರಕರಣಗಳಲ್ಲಿ ಬೆಳೆ ವಿಮೆ ವಿಸ್ತೀರ್ಣ ಹಾಗೂ ಬೆಳೆ ಸಮೀಕ್ಷೆ ದಾಖಲೆ ತಾಳೆ ಆಗುತ್ತಿಲ್ಲ. ವಿಮಾ ಕಂಪನಿಗೆ ನೀಡಿದ ಆರ್‌ಟಿಸಿ ಸಂಖ್ಯೆಯಲ್ಲಿ ತೋರಿಸಿದ ಬೆಳೆ ವಿಸ್ತೀರ್ಣಕ್ಕೂ ಬೆಳೆ ಸಮೀಕ್ಷೆ ಸಂದರ್ಭ ದಾಖಲಿಸಿದ ಬೆಳೆಗೂ ಹೊಂದಾಣಿಕೆ ಆಗುತ್ತಿಲ್ಲ. ಇದರಿಂದ ವಿಮೆ ಕಂಪನಿಗಳು ಪರಿಹಾರ ವಿತರಿಸಲು ಹಿಂದೇಟು ಹಾಕುತ್ತಿವೆ. 69 ಪ್ರಕರಣಗಳಲ್ಲಿ ಆಧಾರ್ ಮತ್ತು ಬ್ಯಾಂಕ್ ಖಾತೆ ಜೋಡಣೆಯಾಗದೆ ಪರಿಹಾರ ಮೊತ್ತ ತಿರಸ್ಕೃತವಾಗಿದೆ.

ಕುಂದುಕೊರತೆ ನಿವಾರಣಾ ಸಮಿತಿ

ಉಡುಪಿ ಜಿಲ್ಲಾಡಳಿತ ಮೊದಲ ಬಾರಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು, ವಿಮಾ ಕಂಪನಿ ಪ್ರತಿ ನಿಧಿಗಳು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ರೈತ ಸಂಘಟನೆ ಪದಾಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಕುಂದುಕೊರತೆಗಳ ನಿವಾರಣಾ ಸಮಿತಿ ರಚಿಸಿದೆ. ವಿಮೆ ಮೊತ್ತ ಬ್ಯಾಂಕ್‌ಗಳ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಜಮೆ ಆಗುವುದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಹೀಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ವಿಮೆ ಪಾವತಿ ಮಾಹಿತಿ ಪಡೆಯಲು ಅನುಮತಿ ಕೋರಿ ಪತ್ರ ಬರೆಯಲು ನಿರ್ಧರಿಸಲಾಗಿದೆ.

ಕಂಪನಿ ಖಾತೆಯಲ್ಲೇ ಉಳಿದಿದೆ 3 ಕೋಟಿ ರೂ.

ಉಡುಪಿ ಜಿಲ್ಲೆಯಲ್ಲಿ 2016-17ನೇ ಸಾಲಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಪ್ರೀಮಿಯಂ ಹಣ ಪಾವತಿಸಿದ ಅನೇಕ ರೈತರಿಗೆ ಈವರೆಗೂ ಪರಿಹಾರದ ಹಣ ಘೋಷಣೆ ಆಗಿಲ್ಲ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ. ಪಾವತಿಸಿದ ಪ್ರೀಮಿಯಂ ಹಣವನ್ನೂ ಹಿಂದಿರುಗಿಸಿಲ್ಲ. 2019-20 ನೇ ಸಾಲಿನಲ್ಲಿ ಪರಿಹಾರದ ಘೋಷಣೆಯಾಗಿ ಸೆಪ್ಟೆಂಬರ್ ತಿಂಗಳಲ್ಲಿ ಹಣ ಪಾವತಿ ಆಗಬೇಕಿತ್ತು. ಆದರೆ ಡಿಸೆಂಬರ್ ಕೊನೆಗೆ ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ. 1,172ಕ್ಕೂ ಹೆಚ್ಚು ರೈತರ ಖಾತೆಗೆ ಪಾವತಿ ಆಗಬೇಕಿದ್ದ 3 ಕೋಟಿ ರೂ.ಹೆಚ್ಚು ಪರಿಹಾರದ ಹಣ ವಿಮಾ ಕಂಪನಿ ಖಾತೆಯಲ್ಲಿದೆ ಎಂದವರು ಮಾಹಿತಿ ನೀಡಿದ್ದಾರೆ.

ದ.ಕ.ದಲ್ಲಿಯೂ ಪಾವತಿ ಬಾಕಿ

ಮಂಗಳೂರು: ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2016-17ನೇ ಸಾಲಿಗೆ ಸಂಬಂಧಿಸಿ 9510 ಪ್ರಕರಣಗಳಿಗೆ 6.74 ಕೋಟಿ ರೂ.ವಿಮಾ ಪರಿಹಾರ ಮೊತ್ತ ಪಾವತಿಸಲಾಗಿದೆ. ವಿವಿಧ ಕಾರಣಗಳಿಗಾಗಿ 524 ಪ್ರಕರಣಗಳ ಇತ್ಯರ್ಥಕ್ಕೆ ಬಾಕಿ ಇದೆ. 2017-18ನೇ ಸಾಲಿನಲ್ಲಿ ನೋಂದಣಿಯಾದ ಎಲ್ಲ 1902 ಪ್ರಕರಣಗಳಿಗೆ 3.53 ಕೋಟಿ ರೂ. ವಿಮಾ ಮೊತ್ತ ಪಾವತಿಯಾಗಿದೆ. 2018-19ನೇ ಸಾಲಿನಲ್ಲಿ 14,979 ಪ್ರಕರಣಗಳಲ್ಲಿ 13,858 ಪ್ರಕರಣಗಳಿಗೆ 37.68 ಕೋಟಿ ರೂ. ವಿಮಾ ಪರಿಹಾರ ಮೊತ್ತ ಪಾವತಿ ಆಗಿದೆ. 1.02 ಕೋಟಿ ರೂ.ಮೊತ್ತದ 361 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದೆ. 2019-20ನೇ ಸಾಲಿನಲ್ಲಿ 27,425 ಪ್ರಕರಣಗಳಿದ್ದು, ಪ್ರಸ್ತುತ ವಿಮಾ ಪರಿಹಾರ ಮೊತ್ತ ಪಾವತಿಸಲಾಗುತ್ತಿದೆ. 11,708 ಪ್ರಕರಣಗಳಿಗೆ 25.65 ಕೋಟಿ ರೂ. ಪಾವತಿ ಮಾಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳೆ ಸಮೀಕ್ಷೆ ವರದಿ ಹಾಗೂ ಬೆಳೆ ವಿಮೆ ವಿಸ್ತೀರ್ಣ ತಾಳೆ ಆಗದೆ ಸಾಕಷ್ಟು ಸಂಖ್ಯೆಯ ರೈತರಿಗೆ ಪರಿಹಾರ ಧನ ಪಾವತಿ ಆಗಿಲ್ಲ. ಇಂತಹ ಪ್ರಕರಣಗಳಲ್ಲಿ ತಾಲೂಕು ಮಟ್ಟದ ತೋಟಗಾರಿಕಾ ಸಹಾಯಕ ನಿರ್ದೇಶಕರು ರೈತರ ಜಮೀನಿಗೆ ತೆರಳಿಗೆ ಜಿಪಿಎಸ್ ಮೂಲಕ ಚಿತ್ರ ಅಪ್‌ಲೋಡ್ ಮಾಡಬೇಕು. ಇಲಾಖೆ ಅಧಿಕಾರಿಗಳು ಈ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಬೆಳೆಗೆ ಸಾಲ ಪಡೆದಿದ್ದರೆ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಚಿತ್ರ ಅಪ್‌ಲೋಡ್ ಮಾಡಬೇಕು. ಈ ಪ್ರಕ್ರಿಯೆ ನಿಧಾನಗತಿಯಲ್ಲಿದೆ. ಶೀಘ್ರ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು.

-ಭುವನೇಶ್ವರಿ, ಉಪನಿರ್ದೇಶಕಿ, ತೋಟಗಾರಿಕಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net