

ಮಂಡ್ಯ: ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ವಿಮೆ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಇಲಾಖೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳವಳ್ಳಿ ತಾಲೂಕಿನ ಶೆಟ್ಟಿಹಳ್ಳಿಯ ಮಲ್ಲೇಗೌಡ ಎಂಬ ರೈತ 2022-23 ಮುಂಗಾರು ಹಂಗಾಮಿನಲ್ಲಿ ಭತ್ತ ನೀರಾವರಿಯ 1.98 ಹೆಕ್ಟೇರ್ ಪ್ರದೇಶಕ್ಕೆ 3,409 ರೂ ವಿಮಾ ಕಂತು ಪಾವತಿಸಿದ್ದರು. ಆದರೆ ಬೆಳೆ ಕಟಾವು ಫಲಿತಾಂಶದ ಅನ್ವಯ ಕಡಿಮೆ ಇಳುವರಿಯ ವಿಮಾ ಮಾರ್ಗಸೂಚಿ ಅನ್ವಯ 1,15,100 ರೂ ವಿಮಾ ಹಣ ಪಡೆದಿರುತ್ತಾರೆ. ಬಿತ್ತನೆಯಿಂದ ಕೊಯ್ಲು ಆಗುವವರೆಗೂ ವಿಮೆಗೆ ಬೆಳೆ ಒಳಪಡುತ್ತದೆ ಎಂಬುದನ್ನು ರೈತರು ಅರ್ಥಮಾಡಿಕೊಳ್ಳಬೇಕಿದೆ. ಕೃಷಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ನೋಂದಾಯಿಸಿಕೊಳ್ಳುವಂತೆ ಮಾಡಿ ಎಂದು ಸಲಹೆ ನೀಡಿದರು.
ರೈತರು ವಿಮಾ ಮೊತ್ತದ ಶೇ.2ರಷ್ಟು ಪಾವತಿ ಮಾಡಬೇಕಿದೆ. ಭತ್ತ ನೀರಾವರಿಗೆ ಎಕರೆಗೆ 755 ರೂ, ಹೆಕ್ಟೇರಿಗೆ 1,865 ರೂ, ಮುಸುಕಿನ ಜೋಳ ನೀರಾವರಿ ಎಕರೆಗೆ 522 ರೂ, ಹೆಕ್ಟೇರಿಗೆ 1,290 ರೂ, ಮುಸುಕಿನ ಜೋಳ ಮಳೆಯಾಶ್ರಿತ ಎಕರೆಗೆ 453 ರೂ, ಹೆಕ್ಟೇರಿಗೆ 1,130 ರೂ, ರಾಗಿ ನೀರಾವರಿ ಎಕರೆಗೆ 411 ರೂ, ಹೆಕ್ಟೇರಿಗೆ 1015 ರೂ, ರಾಗಿ ಮಳೆಯಾಶ್ರಿತ ಎಕರೆಗೆ 344 ರೂ, ಹೆಕ್ಟೇರಿಗೆ 850 ರೂ, ಹುರಳಿ ಮಳೆಯಾಶ್ರಿತ ಎಕರೆಗೆ 166 ರೂ, ಹೆಕ್ಟೇರಿಗೆ 410 ರೂ ವಿಮಾ ಕಂತು ಪಾವತಿಸಲು ಆ.16 ಕೊನೆಯ ದಿನಾಂಕವಾಗಿದೆ ಎಂದರು.
ನೆಲಗಡಲೆ ಮಳೆಯಾಶ್ರಿತ ಎಕರೆಗೆ 441 ರೂ, ಹೆಕ್ಟೇರಿಗೆ 1,090 ರೂ, ಅಲಸಂದೆ ಮಳೆಯಾಶ್ರಿತ ಎಕರೆಗೆ 243 ರೂ, ಹೆಕ್ಟೇರಿಗೆ 600 ರೂ, ಟೊಮ್ಯಾಟೋ ಎಕರೆಗೆ 2,863 ರೂ, ಹೆಕ್ಟೇರಿಗೆ 7,075 ರೂ, ಎಲೆಕೋಸು ಎಕರೆಗೆ 1,523 ರೂ, ಹೆಕ್ಟೇರಿಗೆ 3,775 ರೂ ವಿಮಾ ಕಂತು ಪಾವತಿಸಲು ಜು.15 ಕೊನೆಯ ದಿನವಾಗಿದೆ. ತೊಗರಿ ಮಳೆಯಾಶ್ರಿತ ಎಕರೆಗೆ 388 ರೂ, ಹೆಕ್ಟೇರಿಗೆ 960 ರೂ ವಿಮಾ ಕಂತು ಪಾವತಿಸಲು ಜು.31 ಕೊನೆಯ ದಿನವಾಗಿದೆ. ವಿಮೆ ವಿವರ ಕುರಿತ ಕರಪತ್ರವನ್ನು ಕೃಷಿ ಇಲಾಖೆ ಅವರು ಹೊರತಂದಿದ್ದು, ಅವುಗಳನ್ನು ಜಿಲ್ಲೆಯ ಕೃಷಿ ಪರಿಕರ ಮಾರಾಟ ಮಳಿಗೆ, ಹಾಲಿನ ಡೇರಿ, ರೈತ ಸಂಪರ್ಕ ಕೇಂದ್ರ, ರೈತರು ಹೆಚ್ಚು ಸೇರುವ ಸ್ಥಳಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಿ. ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿ ರೈತರು ಬ್ಯಾಂಕ್‌ಗೆ ಬಂದಾಗ ಸೌಜನ್ಯದಿಂದ ವರ್ತಿಸಿ ಅವರಿಗೆ ಅಗತ್ಯ ಮಾಹಿತಿ ನೀಡಿ ವಿಮೆ ನೋಂದಣಿಗೆ ಪ್ರೋತ್ಸಾಹಿಸಿ ಎಂದು ಸೂಚನೆ ನೀಡಿದರು.
ಕೃಷಿ ಇಲಾಖೆ ಉಪನಿರ್ದೇಶಕಿ ಮಾಲತಿ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಒಟ್ಟು 12,375 ಕ್ವಿಂಟಾಲ್ ವಿವಿಧ ಬೆಳೆಗಳ ಬಿತ್ತನೆ ಬೀಜ ಅಗತ್ಯವಿರುತ್ತದೆ. ಪ್ರಸ್ತುತ ಪೂರ್ವ ಮುಂಗಾರು ಬೆಳೆಗಳಾದ ಅಲಸಂದೆ, ಉದ್ದು ಬೆಳೆಗಳ ಒಟ್ಟು 141 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಪಡೆಯಲಾಗಿದ್ದು, ಇದುವರೆಗೂ 125 ಕ್ವಿಂಟಾಲ್ ವಿತರಣೆಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ ಮತ್ತು ರಾಗಿ ಬೆಳೆಗಳ ಬಿತ್ತನೆ ಬೀಜವನ್ನು ರಾಜ್ಯ ಬೀಜ ನಿಗಮ 9,591 ಕ್ವಿಂಟಾಲ್ ಮತ್ತು ರಾಷ್ಟ್ರೀಯ ಬೀಜ ನಿಗಮ 2,900 ಕ್ವಿಂಟಾಲ್ ಮತ್ತು ಎನ್‌ಎಸ್‌ಪಿ 1,948 ಕ್ವಿಂಟಾಲ್ ಗೋದಾಮುಗಳಲ್ಲಿ ದಾಸ್ತಾನು ಇರಿಸಲಾಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಜುಲೈನಲ್ಲಿ ಸಹಾಯಧನದಲ್ಲಿ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.
ಪ್ರಸ್ತುತ ರಸಗೊಬ್ಬರ ಕೊರತೆ ಇರುವುದಿಲ್ಲ. ಮುಂಗಾರು ಹಂಗಾಮಿಗೆ ಒಟ್ಟು 88,904 ಮೆ.ಟನ್ ರಸಗೊಬ್ಬರದ ಅವಶ್ಯಕತೆ ಇರುತ್ತದೆ. ಏಪ್ರಿಲ್ನಿಂದ ಜೂನ್‌ವರೆಗೆ 41,642 ಮೆ. ಟನ್ ಗುರಿ ಇದ್ದು, 49,470 ಮೆ. ಟನ್ ಸರಬರಾಜು ಪಡೆಯಲಾಗಿದೆ. ನಿಗದಿಪಡಿಸಿರುವ ರಸಗೊಬ್ಬರವನ್ನು ಮುಂದಿನ ದಿನಗಳಲ್ಲಿ ಪಡೆಯಲಾಗುವುದು. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 28,317 ಮೆ.ಟನ್ 7,970 ಮೆ.ಟನ್ ಕಾಪು ದಾಸ್ತಾನು ಚಿಲ್ಲರೆ ಮಾರಾಟಗಾರರಲ್ಲಿ 20,347 ಮೆ.ಟನ್ ರಸಗೊಬ್ಬರ ದಾಸ್ತಾನು ಇದ್ದು ಸಮರ್ಪಕವಾಗಿ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
ಜಂಟಿ ಕೃಷಿ ನಿರ್ದೇಶಕ ವಿ.ಅಶೋಕ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 25,316 ರೈತರು ಒಟ್ಟು 51.38 ಲಕ್ಷ ರೂ ವಿಮಾ ಕಂತು ಪಾವತಿಸಿದ್ದಾರೆ. 25,316 ರೈತರಿಗೆ ವಿಮೆ ಕಂತು ಪಾವತಿ ಮಾಡಿದ ಹಿನ್ನಲೆಯಲ್ಲಿ ವಿವಿಧ ಸಂದರ್ಭದಲ್ಲಿ ಬೆಳೆಗೆ ಉಂಟಾದ ತೊಂದರೆಗಳಿಗೆ ಬೆಳೆ ವಿಮಾ ಮಾರ್ಗಸೂಚಿ ಅನ್ವಯ 14.96 ಕೋಟಿ ರೂ ಪಾವತಿಸಲಾಗಿದೆ ಎಂದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಮಮತಾ, ಕೃಷಿ ವಿ.ವಿಯ ಅರ್ಪಿತಾ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.