ವಿಮೆ ಪರಿಹಾರ ‘ಕನ್ನಡಿಯೊಳಗಿನ ಗಂಟು’

farmer
Published on

ಹುಬ್ಬಳ್ಳಿ: ಫಸಲ್ ಬಿಮಾ ಯೋಜನೆಯ ಬೆಳೆವಿಮೆ ಪರಿಹಾರ ಎಂಬುದು ಧಾರವಾಡ ಜಿಲ್ಲೆಯ ರೈತರಿಗೆ ಕನ್ನಡಿಯೊಳಗಿನ ಗಂಟು ಎಂಬಂತಾಗಿದೆ.
ಕಳೆದ 2022ರ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಾಗಿ ಬೆಳೆ ಕೊಚ್ಚಿ ಹೋಗಿದ್ದರೂ ಬೆಳೆವಿಮೆ ಪರಿಹಾರ ರೈತರಿಗೆ ಸಿಕ್ಕಿಲ್ಲ. ಕೆಲವೇ ಬೆಳೆಗಳಿಗೆ ಪರಿಹಾರ ನೀಡಿ ವಿಮಾ ಕಂಪನಿಯವರು ಕೈತೊಳೆದುಕೊಂಡಿದ್ದಾರೆ.

ಒಂದೆಡೆ ಅತಿವೃಷ್ಟಿಯಿಂದ ತತ್ತರಿಸಿದ ರೈತರು, ಇನ್ನೊಂದೆಡೆ ವಿಮಾ ಕಂತು ಕಟ್ಟಿ ಪರಿಹಾರ ಇಲ್ಲದೆ ಪರಿತಪಿಸುವ ಸ್ಥಿತಿ ಬಂದಿದೆ. ಅದರಲ್ಲೂ ವಿಶೇಷವಾಗಿ ತೋಟಗಾರಿಕೆ ಬೆಳೆಗಳಾದ ಕೆಂಪು ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆದ ರೈತರು ಸಮರ್ಪಕ ಪರಿಹಾರ ಸಿಗದೇ ತೊಂದರೆಗೆ ಸಿಲುಕಿದ್ದಾರೆ.

ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತಿದ ಬೆಳೆಯೂ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಬೆಳೆವಿಮೆ ಪರಿಹಾರ ಒಂದಿಷ್ಟು ಕೈಹಿಡಿಯಬಹುದೆಂಬ ಆಶಯದಲ್ಲಿ ಇದ್ದ ರೈತರಿಗೆ ಬರ ಸಿಡಿಲು ಬಡಿದಂತಾಗಿದೆ. ಕಳೆದ ವರ್ಷದ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರವನ್ನು ಪ್ರಸ್ತುತ ಸರ್ಕಾರ ಕೊಡಿಸುವ ಪ್ರಯತ್ನ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ.

80ರಷ್ಟು ಮೊತ್ತ ಬಂದಿಲ್ಲ

ಧಾರವಾಡ ಜಿಲ್ಲೆಯಲ್ಲಿ ಎರಡು ವರ್ಷದ ಹಿಂದೆ (2021) ಮಳೆ ಪ್ರಮಾಣ 477.10 ಎಂ.ಎಂ. ಆಗಿತ್ತು. ಆಗಲೂ ಅತಿವೃಷ್ಟಿ ಎಂದು ೋಷಿಸಿ ಶೇ. 70ರಿಂದ 80ರಷ್ಟು ವಿಮಾ ಪರಿಹಾರ ನೀಡಲಾಗಿತ್ತು. ಆದರೆ, 2022ರಲ್ಲಿ ಗರಿಷ್ಠ 569 ಎಂ.ಎಂ. (ಸುಮಾರು 100 ಎಂಎಂ ಹೆಚ್ಚು) ಮಳೆಯಾಗಿದೆ. ಬೆಳೆವಿಮೆ ಪರಿಹಾರ ಮಾತ್ರ ಶೇ.15ರಿಂದ 25ರಷ್ಟು ಬಂದಿದೆ. ಈ ಮೂಲಕ ರೈತರಿಗೆ ದೊಡ್ಡ ವಂಚನೆಯಾಗಿದೆ ಎಂದು ಹೇಳಲಾಗಿದೆ.

ತೋಟಗಾರಿಕೆ ಬೆಳೆಗಳನ್ನು ಬಿತ್ತನೆ ಮಾಡಿದ ರೈತರು ಹೆಚ್ಚು ತೊಂದರೆ ಅನುಭವಿಸಿದರು. ಕೆಂಪು ಮೆಣಸಿನಕಾಯಿ, ಉಳ್ಳಾಗಡ್ಡಿ ಸಂಪೂರ್ಣ ಹಾಳಾಗಿದೆ. ಆದರೆ, ಇವುಗಳಿಗೆ ಸಿಕ್ಕಿರುವ ಪರಿಹಾರ ಮಾತ್ರ ಅತ್ಯಲ್ಪ.

160 ಕೋಟಿ ಪ್ರಿಮಿಯಂ

ಧಾರವಾಡ ಜಿಲ್ಲೆಯಲ್ಲಿ 2022ರಲ್ಲಿ 1.37 ಲಕ್ಷ ರೈತರು ಬೆಳೆವಿಮೆ ಪ್ರಿಮಿಯಂ 18.92 ಕೋಟಿ ರೂ. ಪಾವತಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದ ವಂತಿಗೆ 75.86 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದ 63.59 ಕೋಟಿ ರೂ. ಸೇರಿ ಒಟ್ಟು ಅಂದಾಜು 160 ಕೋಟಿ ರೂ. ವಿಮಾ ಕಂಪನಿಗೆ ಹೋಗಿದೆ. ಆದರೆ, ಹತ್ತಾರು ನೆಪಗಳನ್ನು ಹೇಳಿ ಬೆಳೆ ಹಾನಿಗೆ ಸಲ್ ಬಿಮಾ ಯೋಜನೆಯಡಿ ಕೇವಲ 75.63 ಕೋಟಿ ರೂಪಾಯಿ ಪರಿಹಾರ ಬಂದಿದೆ ಎಂದು ರೈತರು ಹೇಳುತ್ತಾರೆ.

ಅಕ್ಟೋಬರ್‌ನಲ್ಲಿ ಮಿಡ್ ಸೀಸನ್ ಅಡ್ವೆರ್ಸಿಟಿಯಡಿ ಸಮೀಕ್ಷೆ ಮಾಡಿದಾಗ ಮೆಣಸಿನಕಾಯಿ ಸೇರಿ ಇತರ ಬೆಳೆಗಳು ಶೇ. 70ರಷ್ಟು ಹಾನಿ ಎಂದು ಹೇಳಲಾಗಿತ್ತು. ಸಮೀಕ್ಷೆ ನಂತರ ಮತ್ತೆ ಹೆಚ್ಚಿನ ಮಳೆಯಾಗಿ, ಬೆಳೆ ಸಂಪೂರ್ಣ ಕೈಕೊಟ್ಟಿವೆ. ಆದರೂ, ಬೆಳೆ ಕಟಾವು ಪ್ರಯೋಗ ಮಾಡುವ ಸಂದರ್ಭದಲ್ಲಿ ಹಾನಿ ಪ್ರಮಾಣ ಕಡಿಮೆ ತೋರಿಸಿ ಪರಿಹಾರದಿಂದ ರೈತರನ್ನು ವಂಚಿಸಲಾಗಿದೆ ಎಂಬುದು ಸದ್ಯದ ದೂರು.

ಹೆಚ್ಚು ಮಳೆಯಾಗಿ 2022ರಲ್ಲಿ ಮೇಲ್ನೋಟಕ್ಕೆ ಬೆಳೆ ಹಾನಿ ಎಂದು ವರದಿ ನೀಡಿದ್ದ ಅಧಿಕಾರಿಗಳು, ವಿಮೆ ಕ್ಲೇಮ್‌ಗಾಗಿ ಬೆಳೆ ಕಟಾವು ಪ್ರಯೋಗ ಮಾಡಿದ ನಂತರ ಸಲು ಹೆಚ್ಚು ಬಂದಿದೆ ಎಂದು ತೋರಿಸಿದ್ದಾರೆ. ಇಲ್ಲೇನು ಪವಾಡ ನಡೆಯಿತೇ? ಇದನ್ನು ಸರ್ಕಾರ ಗಮನಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು.-ದತ್ತಾತ್ರೇಯ ಪಾಟೀಲ, ರೈತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net