

ಬ್ರಹ್ಮಾವರ: ಮಳೆಗಾಲದಲ್ಲಿ ನೀರು ಹರಿದು ಬಂದು ನದಿ ಸೇರುವಾಗ ನದಿ ಪಾತ್ರದಲ್ಲಿ ಕೃತಕ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ ನದಿ, ಹೊಳೆಗಳಿಗೆ ಸಂಪರ್ಕ ವ್ಯವಸ್ಥೆಗಾಗಿ ಮಾಡಲಾಗುವ ಸೇತುವೆ, ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಸಂದರ್ಭ ಹಾಕಲಾಗುವ ಸಹಸ್ರಾರು ಲೋಡ್ ಮಣ್ಣು ಕಲ್ಲುಗಳನ್ನು ತೆರವು ಮಾಡದೆ ಇರುವುದು ಕೃತಕ ಪ್ರವಾಹಕ್ಕೆ ಕಾರಣವಾಗುತ್ತ್ತಿದೆ.
ಕಾಮಗಾರಿ ವೇಳೆ ಸಂಚಾರಕ್ಕೆ ಮತ್ತು ನೀರು ನುಗ್ಗದಂತೆ ತಡೆಯಾಗಿ ನದಿಗೆ ಮಣ್ಣು ತುಂಬಿಸಲಾಗಿ ಕಾಮಗಾರಿ ಬಳಿಕ ತುಂಬಿಸಿದ ಮಣ್ಣನ್ನು ತೆರವು ಮಾಡುವ ಕುರಿತು ಯಾವುದೇ ಗುತ್ತಿಗೆ ಪಡೆದವರು ಮಾಡದಿರುವುದು ಈ ಅವಾಂತರಕ್ಕೆ ಕಾರಣ. ಹೇರೂರು ಮಡಿಸಾಲು ಹೊಳೆಗೆ ಕಿಂಡಿ ಅಣೆಕಟ್ಟು ಕಾಮಗಾರಿ ನಡೆಯುತ್ತಿದೆ. ಮೇ ಅಂತ್ಯದೊಳಗೆ ಕಾಮಗಾರಿ ಮುಗಿಯಬೇಕಿದ್ದು ಈ ವರ್ಷ ಬೇಗ ಮಳೆ ಬಂದ ಕಾರಣ ಅರ್ಧಕ್ಕೆ ನಿಲ್ಲುವಂತೆ ಆಗಿದೆ. ಕಾಮಗಾರಿಗಾಗಿ ಲೋಡುಗಟ್ಟಲೆ ಮಣ್ಣು ತುಂಬಿಸಿದ್ದು, ಈ ವರ್ಷದ ಪ್ರವಾಹಕ್ಕೆ ನದಿಯಲ್ಲಿ ತುಂಬಿಸಲಾದ ಮಣ್ಣು ಯಾವುದೋ ದಿಕ್ಕಿಗೆ ಚಲಿಸಿ ಉಪ್ಪೂರು ಪಶ್ಚಿಮ ಭಾಗದ ನದಿ ತೀರದಲ್ಲಿ ಕೃತಕ ಪ್ರವಾಹದಿಂದ ನೀರು ನುಗ್ಗುವ ಭೀತಿ ಎದುರಾಗಲಿದೆ.
ಬಾರಕೂರಲ್ಲಿ 10 ವರ್ಷದ ಹಿಂದೆ ಹೊಸ ಸೇತುವೆ ಮಾಡುವಾಗ ತಡೆಗಾಗಿ ಬಳಸಿದ ಮಣ್ಣು, ರಸ್ತೆ ನಿರ್ಮಾಣ ವೇಳೇ ಬಳಸಿದ್ದ ಪೈಪು, ಸಿಮೆಂಟ್ ಮಿಶ್ರಿತ ಬಂಡೆಗಳ ಪಳೆಯುಳಿಕೆ ಇಂದಿಗೂ ಕಾಣಸಿಗುತ್ತಿದೆ. ಇದರಿಂದ ಕಚ್ಚೂರು, ನಲ್ಕುದ್ರು, ಹಾಲೇಕೊಡಿ, ಹಂದಾಡಿ ಭಾಗದಲ್ಲಿ ನದಿ ಹರಿವಿನ ದಿಕ್ಕು ಬದಲಿಸಿದೆ. ಇದೇ ರೀತಿ ಕರಾವಳಿಯ ಒಟ್ಟು 24 ನದಿಗಳಲ್ಲಿ ಹೊಸದಾಗಿ ರಚನೆಯಾಗುವ ಸೇತುವೆ, ಕಿಂಡಿ ಅಣೆಕಟ್ಟು ಮಾಡುವಾಗ ಬದಲಿ ರಸ್ತೆ ಮತ್ತು ದಂಡೆಯನ್ನು ಕಾಮಗಾರಿ ಮುಗಿದ ಬಳಿಕ ತೆರವು ಮಾಡಿಸುವ ಕಾರ್ಯ ಸಣ್ಣ ನೀರಾವರಿ ಇಲಾಖೆ ಮಾಡಬೇಕಾಗಿದೆ.
ಪ್ರತಿ ಸೇತುವೆ ಅಥವಾ ಕಿಂಡಿ ಅಣೆಕಟ್ಟು ಮಾಡುವಾಗ ಬದಲಿ ರಸ್ತೆ ಮಾಡಿ ಕಾಮಗಾರಿ ಆದ ಬಳಿಕ ಪೂರ್ತಿ ತೆರವು ಮಾಡುವಂತೆ ಗುತ್ತಿಗೆದಾರರಿಗೆ ಆದೇಶ ಇರುತ್ತದೆ. ಆದರೆ ಬಹತೇಕ ಕಡೆಯಲ್ಲಿ ಮಾಡದಿರುವುದರಿಂದ ನದಿ ತೀರದಲ್ಲಿ ಅವಾಂತರಕ್ಕೆ ಕಾರಣವಾಗುತ್ತದೆ.
ಬಿ. ಭುಜಂಗ ಶೆಟ್ಟಿ, ಮಾಜಿ ಉಡುಪಿ ಜಿಪಂ ಅಧ್ಯಕ್ಷ
ಸೇತುವೆಗಳ ಕಾಮಗಾರಿ ಅಥವಾ ನದಿಗೆ ಕಿಂಡಿ ಅಣೆಕಟ್ಟು ಹಾಕುವಾಗ ಬದಲಿ ರಸ್ತೆಗಾಗಿ ಮಾಡಲಾದ ದಂಡೆಯನ್ನು ಜೆಸಿಬಿ ಯಂತ್ರದ ಮೂಲಕ ಸಾಧ್ಯವಾದಷ್ಟು ತೆರವು ಮಾಡಲೇಬೇಕು ಹಾಗೂ ಮಾಡುತ್ತಾರೆ. ಆದರೆ ಕೆಲವು ಭಾಗದಲ್ಲಿ ಉಳಿದಿರುವುದೂ ಉಂಟು.
ಶೇಷ ಕೃಷ್ಣ, ಉಡುಪಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್