

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ನೀರಿನ ಸಮರ್ಪಕ ಬಳಕೆ ಅರಿತರೆ ಎಂತಹ ಬೆಳೆಗಳಿಂದಲೂ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಮಾಯಕೊಂಡ ಹೋಬಳಿಯ ಸುಲ್ತಾನಿಪುರ ಗ್ರಾಮದ ಪ್ರಗತಿಪರ ಯುವ ರೈತ ಜಿ.ಕೆ. ನಟರಾಜ್ ಗೌಡ ಸಾಬೀತುಪಡಿಸಿದ್ದಾರೆ. ತಮ್ಮ 22 ಎಕರೆ ಜಮೀನಿನಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆದು, ವಾರ್ಷಿಕ 45-50 ಲಕ್ಷ ರೂ. ಆದಾಯ ಗಳಿಸುವ ಮೂಲಕ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.
ಕೃಷಿಯಲ್ಲಿ ವಿನೂತನ ಪ್ರಯೋಗಗಳು: ಬಿಎಸ್ಸಿ ಪದವೀಧರರಾದ ನಟರಾಜ್ ಗೌಡ, ಪದವಿ ಮುಗಿದ ನಂತರ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡರು. ಚಿಕ್ಕ ವಯಸ್ಸಿನಿಂದಲೇ ಅಡಕೆ ಗಿಡಗಳ ನಾಟಿ ಹಾಗೂ ಹೊಸ ತಳಿಯ ಹಣ್ಣು-ತರಕಾರಿಗಳನ್ನು ಬೆಳೆಯುವಲ್ಲಿ ಆಸಕ್ತಿ ತೋರಿ, ಸುತ್ತಮುತ್ತಲಿನ ಹಳ್ಳಿಗಳಿಗೆ ಯಶಸ್ವಿ ಪ್ರಗತಿಪರ ರೈತರಾಗಿ ಹೊರಹೊಮ್ಮಿದ್ದಾರೆ.
ಆರಂಭದಲ್ಲಿ ಮಳೆಯಾಶ್ರಿತ ಮೆಕ್ಕೆಜೋಳ ಬೆಳೆಯುತ್ತಿದ್ದ ಅವರು, 1999-2000 ನೇ ಸಾಲಿನಲ್ಲಿ ಜಮೀನಿನಲ್ಲಿ ಬೋರ್ವೆಲ್ ಕೊರೆಸಿ ಅಡಕೆ ಗಿಡಗಳನ್ನು ನಾಟಿ ಮಾಡಿದರು. ಪ್ರಸ್ತುತ, 9 ಎಕರೆಯಲ್ಲಿ 6,000 ಕ್ಕೂ ಹೆಚ್ಚು ಅಡಕೆ ಮರಗಳು ಫಲ ನೀಡುತ್ತಿವೆ. ಇದರೊಂದಿಗೆ, 4 ಎಕರೆಯಲ್ಲಿ ನೆಟ್ಟಿರುವ 2,500 ಅಡಕೆ ಸಸಿಗಳು ಮೂರು ವರ್ಷಗಳ ಗಿಡಗಳಾಗಿದ್ದು, ಮುಂದಿನ ಒಂದು-ಎರಡು ವರ್ಷಗಳಲ್ಲಿ ಇವುಗಳಿಂದಲೂ ಫಸಲು ನಿರೀಕ್ಷಿಸಲಾಗಿದೆ.
ಮಿಶ್ರಬೆಳೆ ಮತ್ತು ಆದಾಯದ ಲೆಕ್ಕಾಚಾರ: 9 ಎಕರೆ ಪ್ರದೇಶದಲ್ಲಿ 7,500 ಪಪ್ಪಾಯಿ ಸಸಿಗಳನ್ನು ನಾಟಿ ಮಾಡಿದ್ದು, ಇದರೊಂದಿಗೆ ಮಿಶ್ರಬೆಳೆಯಾಗಿ ತಲಾ 7,500 ಚೆಂಡು ಹೂವು ಮತ್ತು ಬದನೆ ಸಸಿಗಳನ್ನು ಬೆಳೆಯುತ್ತಿದ್ದಾರೆ. ಈ ಮೂರು ಬೆಳೆಗಳನ್ನು ಬೆಳೆಯಲು ವಾರ್ಷಿಕವಾಗಿ ಸರಾಸರಿ 14 ಲಕ್ಷ ರೂ. ಖರ್ಚು ಬರುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಕ್ಕರೆ, ಈ ಬೆಳೆಗಳಿಂದ 25-30 ಲಕ್ಷ ರೂ. ಆದಾಯ ಗಳಿಸಬಹುದು ಎಂದು ಅವರು ಅಂದಾಜಿಸಿದ್ದಾರೆ. ಬೆಲೆ ಕುಸಿದರೆ ಮಾತ್ರ ಖರ್ಚು ಮೈಮೇಲೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ.
ಸಮಗ್ರ ನೀರು ನಿರ್ವಹಣೆ: ತೋಟಗಳಿಗೆ ಸಮರ್ಪಕ ನೀರು ನಿರ್ವಹಣೆಗಾಗಿ ಜಮೀನಿನಲ್ಲಿ 60 ಅಡಿ ಅಗಲ, 50 ಅಡಿ ಉದ್ದ ಮತ್ತು 30 ಅಡಿ ಆಳದ ಬೃಹತ್ ಕೃಷಿ ಹೊಂಡ ನಿರ್ವಿುಸಿದ್ದಾರೆ. ನಾಲ್ಕು ಬೋರ್ವೆಲ್ಗಳಿಂದ ಬೇಸಿಗೆಯಲ್ಲಿ ನಿರಂತರವಾಗಿ ಈ ಹೊಂಡಕ್ಕೆ ನೀರು ತುಂಬಿಸಲಾಗುತ್ತದೆ. ನಂತರ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳ ಮೂಲಕ ತೋಟಗಳಿಗೆ ನೀರು ಸರಬರಾಜು ಮಾಡುತ್ತಾರೆ.
ಎಲ್ಲ ಬೆಳೆಗಳಿಗೆ ರಸಗೊಬ್ಬರ, ಕೊಟ್ಟಿಗೆ ಗೊಬ್ಬರ, ಕೂಲಿ ಕಾರ್ವಿುಕರು, ಕೀಟನಾಶಕ, ಉಳುಮೆ, ಕಟಾವು ಮತ್ತು ಮಾರುಕಟ್ಟೆಗೆ ಸಾಗಾಟ ಸೇರಿ ವಾರ್ಷಿಕವಾಗಿ ಸರಾಸರಿ 5-6 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಇದರಿಂದ ದೊರೆಯುವ ಆದಾಯ 35-40 ಲಕ್ಷ ರೂ.ಗೂ ಹೆಚ್ಚು ಎನ್ನುತ್ತಾರವರು.
ಪ್ರತಿಯೊಬ್ಬ ರೈತನೂ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಜತೆಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು. ಅಲ್ಲದೇ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬಹುದು. ಜಿ.ಕೆ. ನಟರಾಜ್ ಗೌಡ, ಪ್ರಗತಿಪರ ಯುವ ರೈತ