ಪರಿಸರಕ್ಕೆ ತಕ್ಕ ಹಾಗೆ ಕೃಷಿ ಮಾಡಿ

nrp 1 (6)
Published on

ಎನ್.ಆರ್.ಪುರ: ರೈತರ ಬೆಳೆಯುವ ಬೆಳೆಗೆ ವ್ಯಾಪಾರಿಗಳು ಬೆಲೆ ಕಟ್ಟುತ್ತಿರುವುದು ವಿಪರ್ಯಾಸ ಎಂದು ಕೊಪ್ಪ ಎಪಿಎಂಸಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ ಹೇಳಿದರು.

ಕಾನೂರು ವಿಎಸ್‌ಎಸ್‌ಎಸ್‌ಎನ್ ಹಾಗೂ ತಾಲೂಕು ಕೃಷಿಕ ಸಮಾಜದ ಆಶ್ರಯದಲ್ಲಿ ವಿಜ್ಞಾನಿಗಳೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಬೆಳೆಗಳಿಗೆ ಯಾವ ಗೊಬ್ಬರ ಹಾಗೂ ಎಷ್ಟು ನೀಡಬೇಕು ಎಂಬ ಬಗ್ಗೆ ವಿಜ್ಞಾನಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಪಡೆಯಬೇಕು. ಅಕಾಲಿಕ ಮಳೆ, ಅತಿವೃಷ್ಟಿಯಿಂದಾಗಿ ರೈತರು ಪ್ರಕೃತಿ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದರು.

ಶಿವಮೊಗ್ಗ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ್ ಮಾತನಾಡಿ, ಈ ಹಿಂದಿನಿಂದಲೂ ಎಲೆಚುಕ್ಕಿ ರೋಗವಿತ್ತು. 2018ರ ನಂತರ ಮಳೆ ಜಾಸ್ತಿಯಾಗಿ ಎಲೆಚುಕ್ಕಿ ರೋಗ ಜಾಸ್ತಿಯಾಯಿತು. ವಿಶೇಷವಾಗಿ ಅಡಕೆ ತೋಟಗಳಿಗೆ ಎಲೆಚುಕ್ಕಿ ರೋಗ ಕಾಣಿಸಿದ್ದರಿಂದ ಅಡಕೆ ಬೆಳೆಗಾರರಿಗೆ ಹೆಚ್ಚು ನಷ್ಟ ಉಂಟಾಯಿತು. ಪರಿಸರಕ್ಕೆ ತಕ್ಕ ಹಾಗೆ ಕಷಿ ಮಾಡಿ ಲಾಭದಾಯಕವಾಗಿ ಮಾಡಬೇಕಾಗಿದೆ ಎಂದರು.

ಶಿವಮೊಗ್ಗ ಅಡಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಕಿರಣಕುಮಾರ್ ಮಾತನಾಡಿ, ಮಲೆನಾಡು ಭಾಗದಲ್ಲಿ ಅಡಕೆಗೆ ಕೊಳೆ ರೋಗ, ಸುಳಿ ಕೊಳೆಯುವ ರೋಗ, ಹಳದಿ ಎಲೆ ರೋಗ ಹೆಚ್ಚಾಗಿದೆ. ಜೂನ್,ಜುಲೈ ತಿಂಗಳಲ್ಲಿ ಮಳೆ ಮಧ್ಯದಲ್ಲಿ ಬಿಸಿಲು ಬಂದಾಗ ಕೊಳೆ ರೋಗ ಜಾಸ್ತಿಯಾಗಲಿದೆ. ಈ ವರ್ಷ ಮೇ 20ಕ್ಕೆ ಮುಂಗಾರು ಬಂದಿರುವುದರಿಂದ ಅಡಕೆ ಕೊಳೆ ರೋಗಕ್ಕೆ ಸಿಂಪರಣೆ ಮಾಡಲು ತೊಂದರೆಯಾಗಿದೆ. 1905 ರಿಂದಲೂ ಅಡಕೆ ಕೊಳೆ ರೋಗ ಹತೋಟಿಗೆ ಬೋರ್ಡೋ ಸಿಂಪರಣೆ ಮಾಡಲಾಗುತ್ತಿದೆ. ಮಳೆಗಾಲಕ್ಕೂ ಮುನ್ನಾ ಬೋರ್ಡೋ ಸಿಂಪರಣೆ ಮಾಡಬೇಕು ಎಂದು ಬೋರ್ಡೋ ದ್ರಾವಣ ಮಾಡುವ ವಿಧಾನದ ಬಗ್ಗೆ ವಿವರಿಸಿದರು.

ಕಾನೂರು ವಿಎಸ್‌ಎಸ್‌ಎನ್‌ಅಧ್ಯಕ್ಷ ವಿ.ಕೆ.ಸುಧಾಕರ, ಸಹಾಯಕ ಪ್ರಾಧ್ಯಾಪಕ ಡಾ. ಸುದೀಪ್, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜಪ್ಪಗೌಡ, ಕಾನೂರು ಉಪಾಧ್ಯಕ್ಷ ಟಿ.ಹಿರಿಯಣ್ಣ, ವಿಎಸ್‌ಎಸ್‌ಎನ್ ಸಿಇಒ ಸುಫೀಲ್,ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರೋಹಿತ್, ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net