ಭತ್ತ ಬೆಳೆಯುವತ್ತ ರೈತರ ಚಿತ್ತ

10mnd1 photo - Copy
Published on

ಮುಂಡಗೋಡ: ನಿರಂತರ ಮಳೆಯಿಂದ ಹಾನಿಯಾದ ಗೋವಿನಜೋಳ ಬೆಳೆಯ ಗದ್ದೆಯಲ್ಲಿ ರೈತರು ಭತ್ತದ ನಾಟಿ ಮಾಡಲು ಸಿದ್ಧತೆ ನಡೆಸಿದ್ದಾರೆ.

ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಹೊಂದುವ ಬೆಳೆಯಾಗಿರುವ ಗೋವಿನಜೋಳದ ಬೆಳೆಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಜೂನ್ ತಿಂಗಳ ಆರಂಭದಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಬಿತ್ತನೆಯಾದ ಗೋವಿನಜೋಳವೂ ಮೊಳಕೆಯೊಡೆಯುವ ಹಂತದಲ್ಲಿ ಹಾಗೂ ಮೊಳಕೆಯೊಡೆದ ನಂತರದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಬಹುತೇಕ ಕಡೆ ಗೋವಿನಜೋಳ ಬೆಳೆ ಹಾನಿಯಾಗಿದೆ. ಇದರಿಂದ ಮುಂಗಾರು ಹಂಗಾಮಿನಲ್ಲಿ ಬಹುತೇಕ ರೈತರು ಗೋವಿನಜೋಳ ಬೆಳೆ ಬೆಳೆಯಲಾಗದೆ ಇದೀಗ ಭತ್ತದ ನಾಟಿಯತ್ತ ಮುಖ ಮಾಡಿದ್ದಾರೆ.

ಗದ್ದೆಯಲ್ಲಿನ ನೀರು ಹರಿದು ಹೊಗದಂತೆ ತಡೆ ಹಾಕಿ ಭತ್ತದ ನಾಟಿಗೆ ಮುಂದಾಗಿದ್ದು, ಪ್ರತಿವರ್ಷವೂ ತಾಲೂಕಿನಲ್ಲಿ 400 ಹೆಕ್ಟೇರ್​ನಷ್ಟು ಭತ್ತದ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ಈ ವರ್ಷ 1000 ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಭತ್ತದ ನಾಟಿ ಬೆಳೆಯುವ ಸಾಧ್ಯತೆ ಇದೆ.

ಮಳೆಯ ಪ್ರಮಾಣವೂ ಇಳಿಮುಖವಾಗಿ ಬಿಸಿಲಿನ ವಾತಾವರಣ ನಿರ್ವಣವಾಗಿರುವ ಪರಿಣಾಮ ರೈತರು ಭತ್ತದ ನಾಟಿಯತ್ತ ಹೆಚ್ಚಿನ ಗಮನ ಹರಿಸಿದ್ದು, ತಾಲೂಕಿನ ಬಹುತೇಕ ಕಡೆಗಳಲ್ಲಿ ಭತ್ತದ ನಾಟಿ ಮಾಡುವ ಕಾರ್ಯಕ್ಕೆ ಭರದ ಸಿದ್ಧತೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net