

ರಾಯಚೂರು ಭೂ ರಹಿತ ಪರಿಶಿಷ್ಟ ಜಾತಿ ಜನರಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿಯಲ್ಲಿ ಮಸ್ಕಿ ಪುರಸಭೆ ಘನ ತ್ಯಾಜ್ಯ ವಿಲೇವಾರಿ ಮಾಡಲು ವಶಪಡಿಸಿಕೊಂಡಿರುವದು ಕಾನೂನು ವಿರೋಧಿ ನಡೆಯಾಗಿದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಮಸ್ಕಿ ತಾಲೂಕಿನ ಮ್ಯಾದರಾಳ ಗ್ರಾಮದ ಸರ್ಕಾರಿ ಜಮೀನು ಸರ್ವೆ 93 ರಲ್ಲಿ 132 ಎಕರೆ 16 ಗುಂಟೆ ಗೈರಾಣಿ ಭೂಮಿಯನ್ನು ಮೂರು ಹಂತದಲ್ಲಿ ಸರ್ಕಾರ ಭೂರಹಿತ ದಲಿತ ಕುಟಂಬಗಳಿಗೆ ಹಂಚಿಕೆ ಮಾಡಿತ್ತು. 38 ಕುಟುಂಬಗಳು ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿವೆ. 1970-71 ರಲ್ಲಿ 5 ಜನರಿಗೆ, 1973-74 ರಲ್ಲಿ 12 ಜನರಿಗೆ ಹಾಗೂ 979-80 ರಲ್ಲಿ 124 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ.
ಸರ್ಕಾರ ಮಂಜೂರು ಮಾಡಿದ ಭೂಮಿಯಲ್ಲಿ ಮಸ್ಕಿ ಪಟ್ಟಣದಿಂದ 20 ಕಿಲೋ ಮೀಟರ್ ದೂರದಲ್ಲಿ ಕಸ ಹಾಕುವ ಸ್ಥಳಕ್ಕೆ ರೈತರಭೂಮಿ ಪಡೆಯಲು ಮಸ್ಕಿ ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದ ಬಿತ್ತನೆ ಮಾಡಿ ಉಳುಮೆ ಮಾಡು ತ್ತಿರುವ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಲಾಗುತ್ತದೆ.
ಮಂಗಳವಾರದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಪ್ರಾರಂಭಿಸಲಾಗುತ್ತದೆ. ಅಲ್ಲದೇ ಎಲ್ಲ ಬಾಧಿತ ಗ್ರಾಮಸ್ಥರೊಂದಿಗೆ ಭೂಮಿ ವಶಪಡಿಸಿಕೊಳ್ಳುವ ಹೋರಾಟ ನಡೆಸಲಾಗುತ್ತದೆ ಎಮದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮಯ್ಯ ಜವಳಗೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಪ್ಪ ದೇವಸೂಗೂರು, ವೆಂಕಟೇಶ ರತ್ನಾಪುರ, ಲಾಲಸಾಬ ನಾಡಗೌಡ, ಮಾನಯ್ಯ, ಕಾಮಣ್ಣ, ಮಹಾದೇವಪ್ಪ, ಶಿವರಾಜ, ನಾಗಪ್ಪ ಇದ್ದರು.